ಕೋವಿಡ್ ಮೃತರಿಗೆ ಪರಿಹಾರ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್
ಹೊಸದಿಲ್ಲಿ, ಮೇ 17: ಕೊರೋನ ಸೋಂಕಿನಿಂದ ಮೃತಪಟ್ಟ ಅಸಹಾಯಕರ ಕುಟುಂಬಗಳಿಗೆ ಪರಿಹಾರ ಒದಗಿಸುವ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಕ್ಕೆ ಸೂಚಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರಕಾರಗಳು ನಿವೇದನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಹಾರ ನೀಡುವುದು ಸರಕಾರದ ನೀತಿ ನಿರ್ಧಾರಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಇದರಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಕೊರೋನ ಸೋಂಕಿನಿಂದ ಮೃತಪಟ್ಟವರಲ್ಲಿ ಕೆಲವರ ದುಡಿಮೆಯಿಂದಲೇ ಕುಟುಂಬ ಜೀವನ ಸಾಗಿಸುವ ಪರಿಸ್ಥಿತಿಯಿದೆ. ಈಗ ಇಂತಹ ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿವೆ. ಆದ್ದರಿಂದ ಇಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಥವಾ ಪಿಎಂ ಕೇರ್ಸ್ ನಿಧಿಯಿಂದ ಸೂಕ್ತ ಪರಿಹಾರ ಒದಗಿಸಲು ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ನ್ಯಾಯವಾದಿ ಪೂರವ್ ಮಿದ್ಧಾ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ, ಕೊರೋನ ಸೋಂಕು ಅಪಾಯಕಾರಿ ರೂಪದಲ್ಲಿ ಹರಡುತ್ತಿರುವುದರಿಂದ ಇಂತಹ ಪ್ರಕರಣ ಹೆಚ್ಚುವ ಸಾಧ್ಯತೆಯಿದೆ. ಆಮ್ಲಜನಕ ಮತ್ತು ಔಷಧದ ಕೊರತೆಯಿಂದ ಮೃತಪಟ್ಟರೆ ಆ ಪ್ರಕರಣಗಳಿಗೆ ಸರಕಾರವನ್ನೇ ಹೊಣೆಯಾಗಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸದ ಹೈಕೋರ್ಟ್, ಈ ಅರ್ಜಿಯನ್ನು ನಿವೇದನೆ ಎಂದು ಪರಿಗಣಿಸಿ ಕಾನೂನು, ನಿಯಮ ಮತ್ತು ಕಾರ್ಯನೀತಿಗೆ ಅನುಗುಣವಾಗಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಸರಕಾರಗಳಿಗೆ ಸೂಚಿಸಿದೆ.