3 ಲಕ್ಷಕ್ಕಿಂತ ಕೆಳಗಿಳಿದ ದೈನಂದಿನ ಸೋಂಕು ಪ್ರಕರಣ
ಹೊಸದಿಲ್ಲಿ, ಮೇ 17: ಕಳೆದ 26 ದಿನದಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಕೊರೋನ ಸೋಂಕಿನ ದೈನಂದಿನ ಪ್ರಕರಣ 3 ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.
ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ 2,81,386 ಹೊಸ ಸೋಂಕು ಪ್ರಕರಣ ದಾಖಲಾಗಿದೆ. ಎಪ್ರಿಲ್ 22ರಿಂದ ನಿರಂತರ ಪ್ರತೀ ದಿನ ಹೊಸ ಸೋಂಕು ಪ್ರಕರಣ 3 ಲಕ್ಷದ ಗಡಿ ದಾಟುತ್ತಿತ್ತು. ಆದರೆ ಈಗ ಇಳಿಕೆಯಾಗಿರುವುದು ಸೋಂಕಿನ ಇಳಿಮುಖದ ಸಂಕೇತವಾಗಿದೆ ಎಂದು ಇಲಾಖೆ ಹೇಳಿದೆ.
ದೇಶದಲ್ಲಿ ಒಟ್ಟು ಸೋಂಕಿನ ಪ್ರಕರಣ 2,49,65,463. ಇದರಲ್ಲಿ 2,11,74,076 ಮಂದಿ ಚೇತರಿಸಿಕೊಂಡಿದ್ದರೆ 35,16,997 ಸಕ್ರಿಯ ಪ್ರಕರಣಗಳಿವೆ. ಮೃತಪಟ್ಟವರ ಪ್ರಮಾಣ 2,74,390 ಎಂದು ಇಲಾಖೆ ಹೇಳಿದೆ. ಅತ್ಯಧಿಕ ಸಕ್ರಿಯ ಪ್ರಕರಣಗಳಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು 6,00,168 ಸಕ್ರಿಯ ಪ್ರಕರಣಗಳಿವೆ. ದ್ವಿತೀಯ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 4,70,595 ಸಕ್ರಿಯ ಪ್ರಕರಣಗಳಿವೆ. ಮೇ 16ರವರೆಗೆ 31,64,23,658 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.