ಕೋವಿಡ್ ನಿರ್ವಹಣೆಯಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದ ಕೆ.ಕೆ.ಶೈಲಜಾರಿಗೆ ಕೇರಳ ಸಂಪುಟದಲ್ಲಿ ಸ್ಥಾನವಿಲ್ಲ
ಹಿಂದಿನ ಸಂಪುಟದಲ್ಲಿದ್ದ ಎಲ್ಲಾ ಮಂತ್ರಿಗಳನ್ನು ಕೈಬಿಟ್ಟು ಹೊಸಬರಿಗೆ ಮಣೆ

ತಿರುವನಂತಪುರಂ: ಕೇರಳದ ಆರೋಗ್ಯ ಸಚಿವೆಯಾಗಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ವಿಚಾರದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದ ಕೆ.ಕೆ.ಶೈಲಜಾ ಅವರನ್ನು ಎಡರಂಗ ಸರಕಾರದ ಹೊಸ ಸಂಪುಟದಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ndtv ವರದಿ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತುಪಡಿಸಿ ಹಿಂದಿನ ಎಲ್‌ಡಿಎಫ್ ಸರಕಾರದಲ್ಲಿ ಸಚಿವರಾಗಿದ್ದ ಎಲ್ಲರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗಿದೆ.
"ಇದು ನಮ್ಮ ಪಕ್ಷದ ನಿರ್ಧಾರ. ನಮ್ಮ ಪಕ್ಷಕ್ಕೆ ಮಾತ್ರ ಹಾಗೆ ಮಾಡುವ ಧೈರ್ಯವಿದೆ. ನಮಗೆ ಹೊಸ ಮುಖಗಳು ಬೇಕು ”ಎಂದು ಸಿಪಿಎಂ ಶಾಸಕ ಎ.ಎನ್.ಶಂಶೀರ್ ndtvಗೆ ತಿಳಿಸಿದರು.
ಎಂ.ವಿ.ಗೋವಿಂದನ್, ಕೆ ರಾಧಾಕೃಷ್ಣನ್, ಕೆ.ಎನ್. ಬಾಲಗೋಪಾಲ್, ಪಿ ರಾಜೀವ್, ವಿ.ಎನ್. ವಾಸವನ್, ಸಾಜಿ ಚೆರಿಯನ್, ವಿ ಶಿವಂಕುಟ್ಟಿ, ಮುಹಮ್ಮದ್ ರಿಯಾಸ್, ಡಾ.ಆರ್.ಬಿಂದು, ವೀಣಾ ಜಾರ್ಜ್ ಮತ್ತು ವಿ. ಅಬ್ದುಲ್ ರಹಮಾನ್ ಅವರು ಹೊಸ ಸಂಪುಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
64ರ ವಯಸ್ಸಿನ ಮಾಜಿ ಸಚಿವೆ, "ಶೈಲಾಜಾ ಟೀಚರ್" ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದರು. ಇತ್ತೀಚಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಮತ್ತೊಮ್ಮೆ ಅಧಿಕಾರಕ್ಕೆ ಮರಳಿದ್ದ ಎಲ್ ಡಿ ಎಫ್ ಮೈತ್ರಿಕೂಟ ಇತಿಹಾಸವನ್ನು ನಿರ್ಮಿಸಿತ್ತು.
ಶೈಲಜಾ ಅವರು ಕಣ್ಣೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ 60,000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದರು.
ಕೇರಳದಲ್ಲಿ ಮೊದಲ ಅಲೆಯ ಕೋವಿಡ್ ಸೋಂಕನ್ನು ನಿಭಾಯಿಸಿದ್ದಕ್ಕಾಗಿ ಎಂ.ಎಸ್.ಶೈಲಜಾ ಅವರು "ರಾಕ್ ಸ್ಟಾರ್" ಆರೋಗ್ಯ ಮಂತ್ರಿಯಾಗಿ ಕಾಣಿಸಿಕೊಂಡಿದ್ದರು, ಮೊದಲ ಅಲೆಯಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಆರಂಭಿಕ ಯಶಸ್ಸನ್ನು ಗಳಿಸಿದ್ದರು.