ಟಿಎಂಸಿ ಶಾಸಕ ಮದನ್ ಮಿತ್ರ, ಮಾಜಿ ನಾಯಕ ಸೋವನ್ ಚಟರ್ಜಿ ಕೋಲ್ಕತಾ ಆಸ್ಪತ್ರೆಗೆ ದಾಖಲು
ನಾರದಾ ಕುಟುಕು ಪ್ರಕರಣ

ಮದನ್ ಮಿತ್ರ
ಕೋಲ್ಕತಾ: ನಾರದಾ ಕುಟುಕು(ಸ್ಟಿಂಗ್) ಪ್ರಕರಣದಲ್ಲಿ ಸಿಬಿಐ ಬಂಧಿಸಿರುವ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಹಾಗೂ ಪಕ್ಷದ ಮಾಜಿ ನಾಯಕ ಸೋವನ್ ಚಟರ್ಜಿ ಅವರನ್ನು ಮಂಗಳವಾರ ಮುಂಜಾನೆ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರೂ ರಾಜಕಾರಣಿಗಳು ಉಸಿರಾಟದ ಸಮಸ್ಯೆ ಬಗ್ಗೆ ದೂರು ನೀಡಿದ್ದರಿಂದ ಅವರನ್ನು ಸರಕಾರಿ ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಇಬ್ಬರು ಹಿರಿಯ ಮಂತ್ರಿಗಳಾದ ಫಿರ್ಹಾದ್ ಹಕೀಮ್ ಹಾಗೂ ಸುಬ್ರತಾ ಮುಖರ್ಜಿ ಅವರನ್ನು ಸಿಬಿಐ ಸೋಮವಾರ ಬಂಧಿಸಿತ್ತು ನಾಲ್ವರನ್ನು ಸೋಮವಾರ ತಡರಾತ್ರಿ ಕೋಲ್ಕತ್ತಾದ ಪ್ರೆಸಿಡೆನ್ಸಿ ಕರೆಕ್ಷನಲ್ ಹೋಂಗೆ ಕರೆದೊಯ್ಯಲಾಯಿತು.
"ಚಟರ್ಜಿ ಹಾಗೂ ಮಿತ್ರ ಅವರು ಮುಂಜಾನೆ 3 ಗಂಟೆ ಸುಮಾರಿಗೆ ಉಸಿರಾಟದ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಇಬ್ಬರನ್ನೂ ಎಸ್ಎಸ್ಕೆಎಂ ಆಸ್ಪತ್ರೆಯ ವುಡ್ಬರ್ನ್ ವಾರ್ಡ್ನಲ್ಲಿ ಆಮ್ಲಜನಕದ ವ್ಯವಸ್ಥೆಯೊಂದಿಗೆ ಇರಿಸಲಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿವೆ" ಎಂದು ವೈದ್ಯಕೀಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.