ಐಎನ್‌ಎಕ್ಸ್ ಹಣ ಕಪ್ಪುಬಿಳುಪು ಪ್ರಕರಣ ತನಿಖಾ ನ್ಯಾಯಾಲಯ ಕಲಾಪಗಳಿಗೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ

ಹೊಸದಿಲ್ಲಿ,ಮೇ 18: ಐಎನ್‌ಎಕ್ಸ್ ಮಿಡಿಯಾ ಕಪ್ಪುಬಿಳುಪು ಹಣ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ನ್ಯಾಯಾಲಯದ ಕಲಾಪಗಳಿಗೆ ದಿಲ್ಲಿ ಹೈಕೋರ್ಟ್ ಮಂಗಳ ವಾರ ತಡೆಯಾಜ್ಞೆ ನೀಡಿದೆ. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಮತ್ತು ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ, ಐಎನ್‌ಎಕ್ಸ್ ಮೆಡಿಯಾ ಸಂಸ್ಥೆಯ ಮಾಲಕ ಪೀಟರ್ ಮಖರ್ಜಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ತನಿಖೆಯ ಸಂದರ್ಭ ತ ಸಂಗ್ರಹಿಸಲಾದ ಹೇಳಿಕೆಗಳು ಹಾಗೂ ದಾಖಲೆಪತ್ರಗಳ ಪ್ರತಿಗಳನ್ನು ತಾನು ಆರೋಪಿಗಳಿಗೆ ಒದಗಿಸಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗಿರಿಸಬೇಕೆಂದು ಕೋರಿ ಸಿಬಿಐ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ನ್ಯಾಯಾಲಯದ ದಾಖಲೆಗಳನ್ನು ತನಿಖಾ ಸಂಸ್ಥೆಯು ಆರೋಪಿಯ ಪರಿಶೀಲನೆಗಾಗಿ ಒದಗಿಸಬೇಕೆಂಬ ಯಾವುದೇ ನಿಯಮವನ್ನು ಭಾರತೀಯ ದಂಡ ಸಂಹಿತೆಯಲ್ಲಿಲ್ಲ. ಅಲ್ಲದೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗದೆ ಇರುವ ತನಿಖಾ ದಾಖಲೆಗಳನ್ನು ಅದರಲ್ಲೂ ತನಿಖಾ ಪೂರ್ವ ಹಂತದಲ್ಲಿ ಆರೋಪಿಗೆ ಪರಿಶೀಲಿಸಲು ಅನುಮತಿ ನೀಡುವಂತಹ ಅಧಿಕಾರವನ್ನು ಯಾವುದೇ ನಿಯಮವು ಮ್ಯಾಜಿಸ್ಟ್ರೇಟರಿಗೆ ನೀಡಿಲ್ಲ ’’ ಎಂದು ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಸಿಬಿಐ ತಿಳಿಸಿದೆ.
ಪೊಲೀಸರು ಹೊಂದಿರುವ ಪ್ರತಿಯೊಂದು ದಾಖಲೆಗಳಿಗಾಗಿ ಹಕ್ಕೊತ್ತಾಯ ಮಾಡಲು ಆರೋಪಿಗೆ ಸಾಧ್ಯವಿಲ್ಲವೆಂದು ಎಂದು ಸಿಬಿಐ ನ್ಯಾಯಾಲಯದಲ್ಲಿ ಪ್ರತಿಪಾದಿಸಿತು
ಐಎನ್‌ಎಕ್ಸ್ ಮೆಡಿಯಾ ಕಪ್ಪುಬಿಳುಪು ಹಣ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳೆರಡೂ ತನಿಖೆ ನಡೆಸುತ್ತಿವೆ.