ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಸ್ಟಾನ್ ಸ್ವಾಮಿಗೆ ಅನಾರೋಗ್ಯ:ಮುಂಬೈ ಆಸ್ಪತ್ರೆಗೆ ಸ್ಥಳಾಂತರ
ಭೀಮಾ ಕೋರೆಗಾಂವ್ ಪ್ರಕರಣ

ಮುಂಬೈ: 2018 ರ ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಬುಡಕಟ್ಟುಜನಾಂಗದವರ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಅವರನ್ನು ಅನಾರೋಗ್ಯದ ಕಾರಣಕ್ಕೆ ಮಂಗಳವಾರ ತಲೋಜಾ ಜೈಲಿನಿಂದ ಮುಂಬೈನ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು Scroll.in ವರದಿ ಮಾಡಿದೆ.
84ವರ್ಷದ ಸ್ವಾಮಿ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಅವರ ಆರೋಗ್ಯವು ಇತ್ತೀಚೆಗೆ ಹದಗೆಟ್ಟಿತ್ತು. ಇದರ ಪರಿಣಾಮವಾಗಿ, ಜೆಸ್ಯೂಟ್‌ಗಳು ಸ್ವಾಮಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದರು. ಸ್ವಾಮಿ ತನ್ನನ್ನು ತಾವೇ ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ ಅಟೆಂಡೆಂಟ್ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಅನಾರೋಗ್ಯ ಹಾಗೂ ದುರ್ಬಲವಾಗಿದ್ದರೂ ಮಂಗಳವಾರ ಜೈಲಿನಲ್ಲಿರುವ ಸ್ವಾಮಿಗೆ ಕೊರೋನ ವೈರಸ್‌ಗೆ ಲಸಿಕೆ ಹಾಕಲಾಗಿದೆ ಎಂದು Scroll.in ವರದಿ ಮಾಡಿದೆ.
ಮೇ 14 ರಂದು ಸ್ವಾಮಿ ಅವರೊಂದಿಗೆ ಮಾತನಾಡಿದ ಸ್ವಾಮಿಯ ಸ್ನೇಹಿತ ಜೋಸೆಫ್ ಜೇವಿಯರ್, ಸ್ವಾಮಿಯವರು ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ ಮತ್ತುಅವರ ಹೊಟ್ಟೆ ಕೆಟ್ಟಿದೆ ಎಂದು ಹೇಳಿದ್ದಾಗಿ ‘ದಿ ಹಿಂದೂ’ ಶನಿವಾರ ವರದಿ ಮಾಡಿದೆ.