ಕೋವಿಡ್ ಸಂದರ್ಭದಲ್ಲೂ ದೋಚುವುದು ನಾಚಿಕೆಗೇಡು: ಶಿವಾಚಾರ್ಯ ಸ್ವಾಮೀಜಿ
ಬೆಂಗಳೂರು, ಮೇ 18: ಕೋವಿಡ್ ಸಾವು ನೋವಿನ ಸಂದರ್ಭದಲ್ಲೂ ಕೆಲವರು ದೋಚುವುದರ ಬಗ್ಗೆ ಸದಾ ಚಿಂತನಾ ಮಗ್ನರಾಗಿದ್ದಾರೆ. ಇಂತವರಿಗೆ ನಾಚಿಕೆ ಆಗಬೇಕೆಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಜನಾಗ್ರಹ ವತಿಯಿಂದ ರಾಜ್ಯದಲ್ಲಿ ಕೋವಿಡ್‍ನ್ನು ಎಲ್ಲರೂ ಒಗ್ಗಟ್ಟಿನಿಂದ ನಿಭಾಯಿಸುವುದರ ಕುರಿತು ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪ್ರತಿನಿಧಿಗಳ ಜತೆ ನಡೆದ ಆನ್‍ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಖಾಸಗಿ ಆಸ್ಪತ್ರೆಗಳು, ಲ್ಯಾಬ್‍ಗಳು ಕೋವಿಡ್ ಸಂದರ್ಭವನ್ನು ತಮ್ಮ ಹಣದಾಸೆಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲವೆಂದು ಎಚ್ಚರಿಸಿದ್ದಾರೆ.
ದೇಶದಲ್ಲಿ ಕೋವಿಡ್ ಪ್ರಕರಣಗಳಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿವೆ. ಇದನ್ನು ನಿಯಂತ್ರಿಸಿ, ಜನತೆಗೆ ಬದುಕಿನ ಬಗ್ಗೆ ಭರವಸೆ ತುಂಬಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈ ಚೆಲ್ಲಿ ಕುಳಿತಂತೆ ವರ್ತಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನತೆಯ ಪರಿಸ್ಥಿತಿಯನ್ನು ನಿಭಾಯಿಸುವವರು ಯಾರೆಂದು ಅವರು ಪ್ರಶ್ನಿಸಿದ್ದಾರೆ.
ಕೂಲಿಕಾರ್ಮಿಕರ ಮತ್ತು ಬಡವರ ಬದುಕು ಮೂರಾಬಟ್ಟೆಯಾಗಿದೆ. ಸರಕಾರ ಬಡ-ಕೂಲಿಕಾರ್ಮಿಕ ಕುಟುಂಬಕ್ಕೆ 5000 ರೂ. ಪರಿಹಾರ ಧನ ನೀಡಬೇಕು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಉಚಿತ ಚಿಕಿತ್ಸೆ ಒದಗಿಸಬೇಕು, ಕೃಷಿಕರಿಗೆ ಬೀಜ-ಗೊಬ್ಬರ ಪರಿಕರಗಳನ್ನು ಕಡಿಮೆ ಬೆಲೆಗೆ ಕೊಡಬೇಕು ಮತ್ತು ಶ್ರೀಮಂತರಿಗೆ ಶೇ.5ರಷ್ಟು ಹೆಚ್ಚಿನ ತೆರಿಗೆ ವಿಧಿಸಿ, ಆ ಹಣದಲ್ಲಿ ಕೋವಿಡ್ ಉಚಿತ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಹೈಕೋರ್ಟ್ ಹಿರಿಯ ವಕೀಲ ಎಸ್.ಬಾಲನ್, ಗ್ರಾಮೀಣ ಕೂಲಿಕಾರರ ಸಂಘದ ಸ್ವರ್ಣಾಭಟ್, ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪುರುಷೋತ್ತಮ ಬಿಳಿಮಲೆ, ಬೆಳಗಾವಿಯ ಹಿರಿಯ ರೈತ ನಾಯಕರಾದ ಸಿದ್ದಗೌಡ ಮೊದಗಿ, ಜಮಾತೆ ಇಸ್ಲಾಮಿ ಹಿಂದ್‍ನ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಯೂಸಫ್ ಖನ್ನಿ, ಮೂವ್‍ಮೆಂಟ್ ಫಾರ್ ಜಸ್ಟೀಸ್‍ನ ಮುಖಂಡ ಇರ್ಶದ್ ಅಹಮ್ಮದ್ ದೇಸಾಯಿ ಮತ್ತಿತರರಿದ್ದರು.







