ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ

ಹೊಸದಿಲ್ಲಿ, ಮೇ 18: ಮೇ 4ರ ಬಳಿಕ 10ನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಳವಾಗಿದ್ದು ಇದರೊಂದಿಗೆ ತೈಲ ಬೆಲೆ ದೇಶದಲ್ಲಿ ಸಾರ್ವಕಾಲಿಕ ಹೆಚ್ಚಳವನ್ನು ದಾಖಲಿಸಿದಂತಾಗಿದೆ. ಮಂಗಳವಾರ ಮುಂಬೈಯಲ್ಲಿ 1 ಲೀಟರ್ ಪೆಟ್ರೋಲ್ ದರ 99.14 ರೂ.ಗೆ, ಡೀಸೆಲ್ ದರ 90.71 ರೂ.ಗೆ ತಲುಪಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಪೆಟ್ರೋಲ್ ದರದಲ್ಲಿ ಪ್ರತೀ ಲೀಟರ್‌ಗೆ 27 ಪೈಸೆ, ಡೀಸೆಲ್ ದರದಲ್ಲಿ ಪ್ರತೀ ಲೀಟರ್‌ಗೆ 29 ಪೈಸೆ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ 92.85 ರೂ, ಡೀಸೆಲ್ ದರ 83.51 ರೂ.ಗೆ ಹೆಚ್ಚಿದೆ. ರಾಜಸ್ತಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ ಶತಕದ ಗಡಿ ದಾಟಿದೆ. ರಾಜಸ್ತಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.80 ರೂ. ಆಗಿದ್ದು ಇದು ದೇಶದಲ್ಲೇ ಅತ್ಯಧಿಕವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ದರ ಏರಿಕೆಯಾಗಿದ್ದು ಮಾರ್ಚ್ 15ರ ಬಳಿಕ ಇದೇ ಮೊದಲ ಬಾರಿಗೆ 1 ಬ್ಯಾರಲ್ ಕಚ್ಛಾತೈಲದ ದರದಲ್ಲಿ 70 ಡಾಲರ್‌ನಷ್ಟು ಹೆಚ್ಚಳವಾಗಿದೆ ಎಂದು ತೈಲೋತ್ಪನ್ನ ಮಾರಾಟ ಸಂಸ್ಥೆಗಳು ಹೇಳಿವೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬಳಿಕ, ಅಂದರೆ ಮೇ 4ರ ಬಳಿಕ 10 ಬಾರಿ ತೈಲೋತ್ಪನ್ನ ಬೆಲೆಯಲ್ಲಿ ಹೆಚ್ಚಳವಾಗಿದ್ದು ಪೆಟ್ರೋಲ್ ದರ ಲೀಟರ್‌ಗೆ 2.46 ರೂ, ಡೀಸೆಲ್ ದರ ಲೀಟರ್‌ಗೆ 2.78 ರೂ. ಏರಿಕೆಯಾಗಿದೆ.