ಹಿರಿಯ ಬಿಜೆಪಿ ಮುಖಂಡ ಚಮನ್‌ಲಾಲ್ ಗುಪ್ತಾ ಕೋವಿಡ್ ಸೋಂಕಿನಿಂದ ನಿಧನ
ಜಮ್ಮು, ಮೇ 18: ಹಿರಿಯ ಬಿಜೆಪಿ ಮುಖಂಡ, ಮಾಜಿ ಕೇಂದ್ರ ಸಚಿವ ಚಮನ್‌ಲಾಲ್ ಗುಪ್ತಾ(87 ವರ್ಷ) ಮಂಗಳವಾರ ಜಮ್ಮುವಿನಲ್ಲಿರುವ ತನ್ನ ಮನೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ. ಕೊರೋನ ಸೋಂಕಿಗೆ ಒಳಗಾಗಿದ್ದ ಗುಪ್ತಾ ಚೇತರಿಸಿಕೊಂಡಿದ್ದು ಮೇ 16ರಂದು ಮನೆಗೆ ಮರಳಿದ್ದರು. ಆದರೆ ಮಂಗಳವಾರ ಏಕಾಏಕಿ ಆರೋಗ್ಯಸ್ಥಿತಿ ಬಿಗಡಾಯಿಸಿ ಕೊನೆಯುಸಿರೆಳೆದರು ಎಂದು ಅವರ ಹಿರಿಯ ಪುತ್ರ ಅನಿಲ್ ಗುಪ್ತಾ ಹೇಳಿದ್ದಾರೆ.
1934ರಲ್ಲಿ ಜಮ್ಮುವಿನಲ್ಲಿ ಜನಿಸಿದ್ದ ಚಮನ್‌ಲಾಲ್ ಗುಪ್ತಾ, 1972ರಲ್ಲಿ ಜಮ್ಮು ವಿಧಾನಸಭೆಗೆ ಆಯ್ಕೆಯಾಗಿದ್ದರು. 2008-2014ರ ಅವಧಿಯಲ್ಲಿ ಎರಡನೇ ಬಾರಿ ಶಾಸಕರಾಗಿದ್ದರು.
1996ರಲ್ಲಿ ಉಧಂಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1998 ಮತ್ತು 1999ರಲ್ಲಿ ಇದೇ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು. ನಾಗರಿಕ ವಿಮಾನಯಾನ ಇಲಾಖೆ, ರಕ್ಷಣಾ ಇಲಾಖೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆಯಲ್ಲಿ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ ಸಹಿತ ಹಲವು ಮುಖಂಡರು ಗುಪ್ತಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.







