ಉಪ್ಪಿನಂಗಡಿ: ಅತ್ಯಾಚಾರ ಸಂತ್ರಸ್ಥೆಯನ್ನು ಬಾಡಿಗೆ ಮನೆಯಿಂದ ಹೊರದಬ್ಬಲಾಯಿತೇ ?
ಉಪ್ಪಿನಂಗಡಿ: ಮಾನಸಿಕ ಅಸ್ವಸ್ಥ ವಿವಾಹಿತ ಮಹಿಳೆಯನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಸಂತ್ರಸ್ತೆ ವಾಸ್ತವ್ಯ ಹೊಂದಿದ್ದ ಬಾಡಿಗೆ ಮನೆಯಿಂದ ಆಕೆಯನ್ನು ಹೊರದಬ್ಬಲಾಗಿರುವ ಬಗ್ಗೆ ಮಾಹಿತಿ ಪಡೆದ 34 ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ನ ಕಾವಲು ಸಮಿತಿ ಸಭೆಯು ಪ್ರಕರಣದ ಬಗ್ಗೆ ಸತ್ಯ ಶೋಧನೆ ನಡೆಸಲು ನಿರ್ಣಯಿಸಿದೆ.
ಮಾನಸಿಕ ಅಸ್ವಸ್ಥ ಮಹಿಳೆಯ ಗಂಡ ಕಳೆದ ಹತ್ತು ತಿಂಗಳಿಂದ ಗುಜರಾತಿನಲ್ಲಿದ್ದು, ಈಕೆ ತನ್ನ ವಯೋವೃದ್ದ ತಾಯಿಯೊಂದಿಗೆ 34 ನೇ ನೆಕ್ಕಿಲಾಡಿಯ ಪಾಥರ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಈ ಮಧ್ಯೆ ಗ್ರಾಮದ ಸುರೇಶ್ ಪ್ರಭು ಎಂಬಾತ ಆಕೆಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಏಳು ತಿಂಗಳ ಗರ್ಭಿಣಿಯನ್ನಾಗಿಸಿದ ಬಗ್ಗೆ ಉಪ್ಪಿನಂಗಡಿಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿ ಅರೋಪಿಯನ್ನು ಬಂಧಿಸಲಾಗಿತ್ತು.
ಈ ಘಟನೆಯ ಬೆನ್ನಿಗೆಯೇ ಸಂತ್ರಸ್ತೆಯ ಸಾಮಾನು ಸರಂಜಾಮುಗಳನ್ನು ಮನೆಯ ಹೊರಗಿಟ್ಟು ಬೀಗ ಜಡಿಯಲಾಗಿದೆ ಎಂಬ ಮಾಹಿತಿಯು ಪಂಚಾಯತ್ ಆಡಳಿತಕ್ಕೆ ಬಂದಿದ್ದು, ಇದು ಕಳವಳಕಾರಿ ಘಟನೆಯಾಗಿದೆ. ಸ್ವಯಂ ಇಚ್ಚೆಯಿಂದ ಅವರು ನಿರ್ಗಮಿಸಿರುವುದೋ ಅಥವಾ ಬಲವಂತಿಕೆಯಿಂದ ಹೊರದಬ್ಬಲ್ಪಟ್ಟಿರುವುದೋ ತಿಳಿಯದಾಗಿದೆ. ವಿಚಾರಿಸಲು ಸಂತ್ರಸ್ತೆಯೂ ಗ್ರ್ರಾಮದಲ್ಲಿ ಈಗ ಇಲ್ಲದಿರುವುದರಿಂದ ಪ್ರಕರಣದ ಬಗ್ಗೆ ಸತ್ಯಾಂಶ ಶೋಧಿಸಲು ಪೊಲೀಸ್ ಇಲಾಖೆಯ ಸಹಕಾರ ಪಡೆದು ಕಾವಲು ಪಡೆ ಮುಂದಾಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯು ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಶಿವಾಜಿನಗರ, ಉಪಾಧ್ಯಕ್ಷೆ ಸ್ವಪ್ನಾ ಜೀವನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ವಲಯ ಮೇಲ್ವಿಚಾರಕಿ ಸುಜಾತ ಮೊದಲಾದವರು ಉಪಸ್ಥಿತರಿದ್ದರು.
ಅಧಿಕಾರಿಗಳು ಮೌನವಾಗಿದ್ದೇಕೆ! ?
ಅತ್ಯಾಚಾರ ಸಂತ್ರಸ್ಥೆ ಮಾನಸಿಕ ಅಸ್ವಸ್ಥೆಯಾದರೆ, ಆಕೆಯ ತಾಯಿ 70ರ ಹರೆಯದವರು. ಮಗಳು ಏಳು ತಿಂಗಳ ಗರ್ಭೀಣಿಯಾಗಿರುವ ವಿಷಯ ಮೇ 12ರಂದು ಅವರಿಗೆ ಗೊತ್ತಾಗಿತ್ತು. ಅಂದು ಆ ಮನೆಗೆ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ವೈದ್ಯೆ, ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ, 34 ನೆಕ್ಕಿಲಾಡಿ ಗ್ರಾ.ಪಂ.ನ ಉಪಾಧ್ಯಕ್ಷೆ ಸಹಿತ ಕೆಲ ಸದಸ್ಯರು ಭೇಟಿ ನೀಡಿದ್ದರು.
ಅತ್ಯಾಚಾರ ಸಂತ್ರಸ್ಥೆಯೊಂದಿಗೆ ನಿಂತು ಪೋಟೋವನ್ನು ತೆಗೆಸಿಕೊಂಡಿದ್ದರು. ಆಗ ಸಂಶಯ ಬಂದು ಅವರನ್ನು ವೈದ್ಯಕೀಯ ತಪಾಸಣೆ ನಡೆಸಲು ತಿಳಿಸಿದ್ದರು. ಅದರಂತೆ ಮನೆಯವರು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಗಳು ಏಳು ತಿಂಗಳ ಗರ್ಭೀಣಿಯೆಂದು ತಿಳಿದಿತ್ತು. ಅಲ್ಲದೇ ಅವರ ಪತಿ ಇವರನ್ನು ಮುಖತಃ ಭೇಟಿ ಮಾಡದೇ 10 ತಿಂಗಳು ಕಳೆದಿತ್ತು. ಇದೆಲ್ಲಾ ತಿಳಿದ ಬಳಿಕವೂ ಅವರು ಇವರ ನೆರವಿಗೆ ಬಂದಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಕೊನೆಗೇ ನೆಕ್ಕಿಲಾಡಿಯ ಸಾಮಾಜಿಕ ಕಾರ್ಯಕರ್ತರೋರ್ವರನ್ನು ಆ ವೃದ್ಧ ತಾಯಿ ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದು, ಅವರ ಸಲಹೆ ಪ್ರಕಾರ ಮೇ 15ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಇವರ ಮನೆ ಭೇಟಿ ನೀಡಿದ್ದ ಅಧಿಕಾರಿ ಹಾಗೂ ಗ್ರಾ.ಪಂ. ಸದಸ್ಯರಿಗೆ ಈ ಬಗ್ಗೆ ಗೊತ್ತಿದ್ದರೂ ಅವರು ಮೌನವಾಗಿದ್ದೇಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.







