ತೌಕ್ತೆ ಚಂಡಮಾರುತದ ಹಾವಳಿ: ಮಹಾರಾಷ್ಟ್ರದ 2 ಜಿಲ್ಲೆಗಳಲ್ಲಿ 18.43 ಲಕ್ಷ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಡಿತ

ಮುಂಬೈ, ಮೇ 18: ಮಹಾರಾಷ್ಟ್ರದ ಕೊಂಕಣ ಕರಾವಳಿಯ ಸಮೀಪ ಹಾದು ಹೋದ ಬಳಿಕ ಸೋಮವಾರ ರಾತ್ರಿ ದಿಯು ಹಾಗೂ ಉನಾದ ನಡುವಿನ ಸೌರಾಷ್ಟ್ರ ವಲಯದ ಗುಜರಾತ್ ಕರಾವಳಿಗೆ ತೌಕ್ತೆ ಚಂಡಮಾರುತ ಅಪ್ಪಳಿಸಿದ ಪರಿಣಾಮ ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಲ್ಲಿ 18.43 ಗ್ರಾಹಕರಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ ಎಂದು ಅಧಿಕೃತ ಹೇಳಿಕೆ ಮಂಗಳವಾರ ತಿಳಿಸಿದೆ. ಈ ಎರಡು ಜಿಲ್ಲೆಗಳ 3,665 ಗ್ರಾಮಗಳ ಶೇ. 52 ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮರು ಆರಂಭಿಸಲಾಗಿದೆ. ಉಳಿದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಮರು ಸ್ಥಾಪನೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅದು ತಿಳಿಸಿದೆ. ಉಳಿದ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮರು ಸ್ಥಾಪಿಸಲು 13,172 ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಇಂಧನ ಸಚವ ನಿತಿನ್ ರಾವತ್ ಹೇಳಿದ್ದಾರೆ.
ರತ್ನಗಿರಿ, ಸಿಂಧುದುರ್ಗ, ರಾಯಗಡ, ಥಾಣೆ ಹಾಗೂ ಪಾಲ್ಗಾರ್ ಜಿಲ್ಲೆಗಳ ಒಟ್ಟು 13,389 ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶನದಂತೆ ರಾಯಗಢ ಜಿಲ್ಲೆಯಿಂದ 8,383, ರತ್ನಗಿರಿ ಜಿಲ್ಲೆಯಿಂದ 4,563, ಪಾಲ್ಘಾರ್ ಜಿಲ್ಲೆಯಿಂದ 200 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದಲ್ಲದೆ, ಸಿಂಧುದುರ್ಗಾ ಜಿಲ್ಲೆಯಿಂದ 190 ಹಾಗೂ ಥಾಣೆ ಜಿಲ್ಲೆಯಿಂದ 53 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.







