ಪರಮ್ ಬೀರ್ ಸಿಂಗ್ ಮನವಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಬಿ.ಆರ್. ಗವಾಯಿ
ಹೊಸದಿಲ್ಲಿ, ಮೇ 18: ತನ್ನ ವಿರುದ್ಧದ ಎಲ್ಲಾ ತನಿಖೆಗಳನ್ನು ಮಹಾರಾಷ್ಟ್ರದ ಹೊರಗಿನ ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸುವಂತೆ ಕೋರಿ ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಸಲ್ಲಿಸಿದ ಮನವಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಮಂಗಳವಾರ ಹಿಂದೆ ಸರಿದಿದ್ದಾರೆ. ನ್ಯಾಯಮೂರ್ತಿಗಳಾದ ವಿನೀತ್ ಸರನ್ ಹಾಗೂ ಗವಾಯಿ ಅವರನ್ನೊಳಗೊಂಡ ರಜಾಕಾಲದ ಪೀಠದ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ‘‘ಸಹೋದರ (ನ್ಯಾಯಮೂರ್ತಿ ಗವಾಯಿ) ಅವರು ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಕೆಲವು ಸಮಸ್ಯೆಗಳಿವೆ. ಈ ಪ್ರಕರಣವನ್ನು ಇನ್ನೊಂದು ಪೀಠದ ಮುಂದೆ ಸಲ್ಲಿಸಬಹುದು ಎಂದು ನಾವು ಹೇಳಬಹುದು’’ ಎಂದು ನ್ಯಾಯಮೂರ್ತಿ ಸರನ್ ವಿಚಾರಣೆಯ ಆರಂಭದಲ್ಲಿ ಹೇಳಿದರು. ‘‘ನನಗೆ ಈ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ’’ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ನಮ್ಮಲ್ಲಿ ಒಬ್ಬರು ಪ್ರತಿವಾದಿಗಳಲ್ಲದ ಪೀಠದ ಮುಂದೆ ಈ ಮನವಿ ಸಲ್ಲಿಸಿ ಎಂದು ಪೀಠ ಹೇಳಿತು.
ಪರಮ ವೀರ್ ಸಿಂಗ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಪುನೀತ್ ಬಾಲಿ, ಮಾಜಿ ಪೊಲೀಸ್ ಉನ್ನತಾಧಿಕಾರಿಯ ವಿರುದ್ಧದ ತನಿಖೆ ಅವರನ್ನು ಬಲಿಪಶು ಮಾಡುತ್ತಿದೆ ಹಾಗೂ ಅದು ಸುಪ್ರೀಂ ಕೋರ್ಟ್ ಹಾಗೂ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶದ ಉಲ್ಲಂಘನೆ ಎಂದು ಹೇಳಿದರು. ಗೃಹ ಸಚಿವ ಹಾಗೂ ಹಿರಿಯ ಎನ್‌ಸಿಪಿ ನಾಯಕ ಅನಿಲ್ ದೇಶಮುಖ್ ವಿರುದ್ಧ ದುರ್ನಡತೆ ಹಾಗೂ ಭ್ರಷ್ಟಾಚಾರದ ಆರೋಪ ವ್ಯಕ್ತಪಡಿಸಿದ ಬಳಿಕ 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಪರಮ್ ವೀರ್ ಸಿಂಗ್ ಅವರನ್ನು ಮಾರ್ಚ್ 17ರಂದು ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವಜಾಗೊಳಿಸಲಾಗಿತ್ತು ಹಾಗೂ ಅವರನ್ನು ಮಹಾರಾಷ್ಟ್ರ ರಾಜ್ಯ ಹೋಮ್‌ಗಾರ್ಡ್‌ನ ಜನರಲ್ ಕಮಾಂಡರ್ ಆಗಿ ನಿಯೋಜಿಸಲಾಗಿತ್ತು.