ಗಾಝಾ: 52,000ಕ್ಕೂ ಅಧಿಕ ಫೆಲೆಸ್ತೀನೀಯರು ನಿರ್ವಸಿತ: ಒಸಿಎಚ್ಎ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 18: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 52,000ಕ್ಕೂ ಅಧಿಕ ಫೆಲೆಸ್ತೀನೀಯರು ನಿರಾಶ್ರಿತರಾಗಿದ್ದಾರೆ ಹಾಗೂ ಸುಮಾರು 450 ಕಟ್ಟಡಗಳು ಧ್ವಂಸಗೊಂಡಿವೆ ಅಥವಾ ತೀವ್ರ ಹಾನಿಗೀಡಾಗಿವೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್‌ಎ) ಮಂಗಳವಾರ ತಿಳಿಸಿದೆ.
ನಿರ್ವಸಿತರ ಪೈಕಿ ಸುಮಾರು 47,000 ಮಂದಿ ಗಾಝಾದಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ 58 ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಒಸಿಎಚ್‌ಎ ವಕ್ತಾರ ಜೆನ್ಸ್ ಲೇರ್ಕ್ ಹೇಳಿದರು.
132 ಕಟ್ಟಡಗಳು ಧ್ವಂಸಗೊಂಡಿವೆ ಹಾಗೂ ಆರು ಆಸ್ಪತ್ರೆಗಳು ಮತ್ತು ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 316 ಕಟ್ಟಡಗಳು ತೀವ್ರವಾಗಿ ಹಾನಿಗೊಂಡಿವೆ ಎಂದು ಲೇರ್ಕ್ ಹೇಳಿದರು.
ಮಾನವೀಯ ನೆರವು ಸಾಮಗ್ರಿಗಳ ಪೂರೈಕೆಗಾಗಿ ಒಂದು ಗಡಿದಾಟನ್ನು ಇಸ್ರೇಲ್ ತೆರೆದಿರುವುದನ್ನು ಸ್ವಾಗತಿಸುವುದಾಗಿ ವಿಶ್ವಸಂಸ್ಥೆಯ ನೆರವು ಘಟಕ ಹೇಳಿದೆ. ಅದೇ ವೇಳೆ, ಇನ್ನೊಂದು ಗಡಿದಾಟನ್ನೂ ತೆರೆಯುವಂತೆ ಇಸ್ರೇಲನ್ನು ಅದು ಒತ್ತಾಯಿಸಿದೆ.





