ಉತ್ತರಪ್ರದೇಶದ ಸಚಿವ ವಿಜಯ್ ಕಶ್ಯಪ್ ಕೋವಿಡ್ ನಿಂದ ನಿಧನ
ಸಂತಾಪ ಸೂಚಿಸಿದ ಪ್ರಧಾನಿ ಮೋದಿ

Photo: Facebook
ಹೊಸದಿಲ್ಲಿ / ಲಕ್ನೋ: ಉತ್ತರ ಪ್ರದೇಶದ ಕಂದಾಯ ಹಾಗೂ ಪ್ರವಾಹ ನಿಯಂತ್ರಣ ಸಚಿವ ವಿಜಯ್ ಕಶ್ಯಪ್ ಮಂಗಳವಾರ ಗುರ್ಗಾಂವ್ ಆಸ್ಪತ್ರೆಯಲ್ಲಿ ಕೊರೋನವೈರಸ್ ನಿಂದ ನಿಧನರಾದರು.
ಮುಝಫರ್ ನಗರದ ಚಾರ್ತವಾಲ್ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿದ್ದ ಕಶ್ಯಪ್ (56 ವರ್ಷ) ಗುರ್ಗಾಂವ್ನ ಮೆದಾಂತ ಆಸ್ಪತ್ರೆಯಲ್ಲಿ ನಿಧನರಾದರು.
ಕಶ್ಯಪ್ ಅವರು ಕೊರೋನ ವೈರಸ್ಗೆ ಬಲಿಯಾದ ಉತ್ತರಪ್ರದೇಶದ ಮೂರನೇ ಸಚಿವರು. ಕಳೆದ ವರ್ಷ ಉತ್ತರ ಪ್ರದೇಶದ ಮಂತ್ರಿಗಳಾದ ಕಮಲ್ ರಾಣಿ ವರುಣ್ ಹಾಗೂ ಚೇತನ್ ಚೌಹಾಣ್ ಸೋಂಕಿನಿಂದ ಸಾವನ್ನಪ್ಪಿದ್ದರು.
ಕಶ್ಯಪ್ ನಿಧನಕ್ಕ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದರು.
"ಬಿಜೆಪಿ ಮುಖಂಡ ಹಾಗೂ ಉತ್ತರ ಪ್ರದೇಶ ಸರಕಾರದಲ್ಲಿ ಸಚಿವರಾದ ವಿಜಯ್ ಕಶ್ಯಪ್ ಜಿ ಅವರ ನಿಧನ ತುಂಬಾ ದುಃಖಕರವಾಗಿದೆ. ಅವರು ತಳಮಟ್ಟದ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಹಾಗೂ ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ತಮ್ಮನ್ನು ಮೀಸಲಿಟ್ಟಿದ್ದರು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ! " ಪ್ರಧಾನಿ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಕಶ್ಯಪ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಕಶ್ಯಪ್ ಅವರು ಕೊರೋನದ ಎರಡನೇ ಅಲೆಯಲ್ಲಿ ಮೃತಪಟ್ಟಿರುವ ಬಿಜೆಪಿಯ ಐದನೇ ಶಾಸಕರಾಗಿದ್ದಾರೆ. ಇದಕ್ಕೂ ಮುನ್ನ ಸಲೊನ್ ಶಾಸಕ ದಾಲ್ ಬಹದ್ದೂರ್ ಕೋರಿ, ಕೇಸರ್ ಸಿಂಗ್ ಗಂಗ್ವಾರ್ (ನವಾಬ್ ಗಂಜ್), ರಮೇಶ್ ದಿವಾಕರ್ (ಔರಯ್ಯ) ಹಾಗೂ ಸುರೇಶ್ ಕುಮಾರ್ ಶ್ರೀವಾಸ್ತವ (ಲಕ್ನೋ ಪಶ್ಚಿಮ) ಸೋಂಕಿಗೆ ಬಲಿಯಾಗಿದ್ದರು.