ಉತ್ತರಪ್ರದೇಶ: ಕೋವಿಡ್ ನಿಯಂತ್ರಿಸಲು ಸರಕಾರ ವಿಫಲವಾಗಿದೆ ಎಂದು ದೂರಿದ್ದ ಮಾಜಿ ಗ್ರಾಮ ಪ್ರಧಾನನ ವಿರುದ್ಧ ಕೇಸು ದಾಖಲು

ಲಕ್ನೋ: ಕೋವಿಡ್ ಸ್ಥಿತಿಗತಿ ಕುರಿತು ಮಾದ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ವದಂತಿಗಳನ್ನು ಹಬ್ಬಿದ ಆರೋಪದ ಮೇಲೆ ಉತ್ತರ ಪ್ರದೇಶದ ಗೆವ್ಲಾ ಗೋಪಾಲಘರ್ ಗ್ರಾಮದ ಮಾಜಿ ಪ್ರಧಾನರೊಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಈ ಗ್ರಾಮದಲ್ಲಿ ಕಹಿಬೇವಿನ ಮರದಡಿಯಲ್ಲಿ ಮಂಚಗಳಲ್ಲಿ 19 ಕೋವಿಡ್ ಸೋಂಕಿತರು ಮಲಗಿರುವುದು ಹಾಗೂ ಗ್ಲುಕೋಸ್ ಡ್ರಿಪ್ಸ್ ನಳಿಕೆ ಮರದ ಕೊಂಬೆಗಳಲ್ಲಿ ನೇತಾಡುತ್ತಿರುವ ಕುರಿತಂತೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆಸ್ಪತ್ರೆಯಲ್ಲಿ ಬೆಡ್ ದೊರಕದೇ ಇದ್ದ ಈ ಸೋಂಕಿತರು ಮರದಡಿಯಲ್ಲಿ ಮಲಗಿದಲ್ಲಿ ತಮ್ಮ ರಕ್ತದಲ್ಲಿನ ಆಕ್ಸಿಜನ್ ಮಟ್ಟ ಏರಬಹುದೆಂಬ ನಂಬಿಕೆಯಿಂದ ಈ ರೀತಿ ಮಾಡಿದ್ದರು.
ರಾಜ್ಯದಲ್ಲಿ ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಗಳ ನಂತರ ಬಹಳಷ್ಟು ಜನರು ಅಸೌಖ್ಯಪೀಡಿತರಾಗಿದ್ದಾರೆ. ಕೆಮ್ಮು ಅಥವಾ ಜ್ವರದಿಂದ ಬಳಲದೇ ಇರುವವರು ಇರುವ ಒಂದೇ ಒಂದು ಮನೆಯಿಲ್ಲ. ಪರೀಕ್ಷೆ ನಡೆಸಿ ಸೂಕ್ತ ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ಸರಕಾರ ವಿಫಲವಾಗಿದೆ, ಜನರು ನಿಸ್ಸಹಾಯಕರಾಗಿದ್ದಾರೆ, ಕೋವಿಡ್‍ನ ತೀವ್ರ ಲಕ್ಷಣಗಳನ್ನು ಹೊಂದಿರುವವರಿಗೂ ಆಸ್ಪತ್ರೆಗಳು ದಾಖಲಿಸಲು ನಿರಾಕರಿಸುತ್ತಿವೆ ಎಂದು ಮಾಜಿ ಪ್ರಧಾನ ಯೋಗೇಶ್ ತಲನ್ ಆರೋಪಿಸಿದ್ದರು.
ಆದರೆ ಸ್ಥಳೀಯಾಡಳಿತ ಮಾತ್ರ ಗ್ರಾಮದಲ್ಲಿ ಎರಡು ಕೋವಿಡ್ ಪರೀಕ್ಷಾ ಶಿಬಿರಗಳನ್ನು ಮೇ 13ರಂದು ನಡೆಸಲಾಗಿತ್ತು ಹಾಗೂ ತಲನ್ ಅವರು ಗ್ರಾಮಸ್ಥರಿಗೆ ಈ ಕುರಿತು ಸೂಕ್ತ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದೆ.
ಗ್ರಾಮದ ಇನ್ನೊಬ್ಬ ನಿವಾಸಿ 65 ವರ್ಷದ ಹರ್ವೀರ್ ತಲನ್ ಎಂಬಾತನಿಗೆ ಕೋವಿಡ್ ಸೋಂಕಿನ ತೀವ್ರ ಲಕ್ಷಣಗಳಿರುವ ಹೊರತಾಗಿಯೂ ಹಾಗೂ ಆಸ್ಪತ್ರೆಯಲ್ಲಿ ದಾಖಲಾತಿ ಸಾಧ್ಯವಿದ್ದರೂ ಆತ ನಿರಾಕರಿಸಿದ್ದ, ಆತನ ಕುಟುಂಬವನ್ನು ಯೋಗೇಶ್ ತಪ್ಪು ದಾರಿಗೆಳೆದಿದ್ದೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ದೂರಿದ್ದಾರೆ.
ಯೋಗೇಶ್ ತಲನ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯಿದೆ ಹಾಗೂ ಐಪಿಸಿ ಸೆಕ್ಷನ್ 269 ಹಾಗೂ 270 ಅನ್ವಯ ಪ್ರಕರಣ ದಾಖಲಿಸಲಾಗಿದೆ.