ಮಾಸ್ಕ್ ಧರಿಸಲು ವಿರೋಧ: ಡಾ.ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು, ಮೇ 19: ನಗರದ ಸೂಪರ್ ಬಝಾರೊಂದರಲ್ಲಿ ಖರೀದಿಗೆ ಹೋಗಿದ್ದ ಸಂದರ್ಭ ನಗರದ ಖ್ಯಾತ ವೈದ್ಯರೊಬ್ಬರು ಮಾಸ್ಕ್ ಧರಿಸಲು ವಿರೋಧಿಸಿ, ಸಿಬ್ಬಂದಿ ಜತೆ ವಾಗ್ವಾದ ನಡೆಸಿದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘‘ಸಾಮಾಜಿಕ ಜಾಲತಾಣಗಳಲ್ಲಿ ಇಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧದ ವೀಡಿಯೋವೊಂದು ವೈರಲ್ ಆಗಿದೆ. ಡಾ. ಕಕ್ಕಿಲ್ಲಾಯರು ನಗರದ ಸೂಪರ್ ಬಝಾರೊಂದರಲ್ಲಿ ಖರೀದಿ ಸಂದರ್ಭ ಮಾಸ್ಕ್ ಧರಿಸದೆ, ಅಲ್ಲಿನ ಸಿಬ್ಬಂದಿ ಮಾಸ್ಕ್ ಧರಿಸಲು ವಿನಂತಿಸಿದಾಗ ವಿರೋಧಿಸಿದ್ದಾರೆ. ಈ ಕುರಿತು ಆ ಸೂಪರ್ ಬಝಾರ್ನ ಮಾಲಕರು ನೀಡಿರುವ ದೂರಿನಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮೇ 18ರಂದು ಬೆಳಗ್ಗೆ ಕದ್ರಿಯ ಸೂಪರ್ ಮಾರುಕಟ್ಟೆಯಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯರು ಖರೀದಿಗೆ ಹೋಗಿದ್ದಾಗ ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ಕೆಲವು ಗ್ರಾಹಕರು ದೂರಿದ್ದು, ಸಿಬ್ಬಂದಿಯೂ ಮಾಸ್ಕ್ ಧರಿಸಲು ಅವರನ್ನು ವಿನಂತಿಸಿದ್ದಾರೆ. ಆದರೆ ಸರಕಾರ ಮಾಡಿರುವುದು ಮೂರ್ಖತನದ ಕಾನೂನು, ಮಾಸ್ಕ್ ಧರಿಸಬೇಕಾಗಿಲ್ಲ, ಸರಕಾರ ಹೇಳಿದ್ದೆಲ್ಲಾ ಕೇಳುತ್ತಿರಾ ಎಂದು ಅಂಗಡಿಯವರಲ್ಲಿ ವಾದ ಮಾಡಿರುವ ವೀಡಿಯೋ ಒಂದು ಇಂದು ಬೆಳಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಐಎಂಎ ಮಂಗಳೂರು ಘಟಕದಿಂದ ಖಂಡನೆ
ಡಾ. ಬಿ.ಎಸ್. ಕಕ್ಕಿಲ್ಲಾಯ ಅವರು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೆ, ಸರಕಾರದ ನಿಯಮಗಳ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಖಂಡಿಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಮಾತ್ರವಲ್ಲದೆ, ಶ್ರೀನಿವಾಸ ಕಕ್ಕಿಲ್ಲಾಯರು ನೀಡಿರುವ ಯಾವುದೇ ಹೇಳಿಕೆ ಅಥವಾ ಕ್ರಿಯೆಯನ್ನು ತಾನು ಬೆಂಬಲಿಸುವುದಿಲ್ಲ ಎಂದೂ ಪ್ರಕಟನೆಯಲ್ಲಿ ತಿಳಿಸಿದೆ.
ನಾನೇನೂ ಸೂಪರ್ ಮಾರ್ಕೆಟ್ನವರೊಂದಿಗೆ ಚರ್ಚೆ ಮಾಡಿಲ್ಲ. ನಾನು ಜವಾಬ್ಧಾರಿಯುತ ವೈದ್ಯನಾಗಿ ಕೆಲಸ ಮಾಡುವವನು. ನನ್ನಿಂದ ಯಾರಿಗೂ ಕೋವಿಡ್ ಹರಡುವುದಿಲ್ಲ. ನನಗೆ ಈಗಾಗಲೇ ಕೋವಿಡ್ ಬಂದಿದೆ. ಇದನ್ನು ಅವರಿಗೆ ಮನದಟ್ಟು ಮಾಡುವ ಕೆಲಸವಷ್ಟೆ ಮಾಡಿದ್ದೇನೆ. ಸೂಪರ್ ಮಾರ್ಕೆಟ್ನವರು ತಮ್ಮ ದೃಶ್ಯಾವಳಿಯನ್ನು ಸೋಶಿಯಲ್ ಮೀಡಿಯಾಕ್ಕೆ ಕೊಟ್ಟಿರುವುದು ಸರಿಯಲ್ಲ. ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಕಾನೂನನ್ನು ಗೌರವಿಸುವ ವ್ಯಕ್ತಿಯಾಗಿ ಪೊಲೀಸರು ನೀಡಿರುವ ನೊಟೀಸಿಗೆ ಉತ್ತರ ನೀಡಿ ಬಂದಿದ್ದೇನೆ.
-ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಖ್ಯಾತ ವೈದ್ಯರು, ಮಂಗಳೂರು







