ಕಣ್ಣಿನ ಸೋಂಕಿಗೆ ಗುರಿಯಾಗಿರುವ ಹನಿಬಾಬುವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಹೈಕೋರ್ಟ್ ಆದೇಶ
ಭೀಮಾ-ಕೋರೆಗಾಂವ್ ಪ್ರಕರಣ

photo: twitter (@hanybabu)
ಮುಂಬೈ,ಮೇ 19: ಕೋವಿಡ್-19ಕ್ಕೆ ತುತ್ತಾದ ಬಳಿಕ ಕಣ್ಣಿನಲ್ಲಿ ಸೋಂಕು ಉಂಟಾಗಿರುವ ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲೋರ್ವರಾಗಿರುವ ದಿಲ್ಲಿ ವಿವಿಯ ಅಸೋಸಿಯೇಟ್ ಪ್ರೊಫೆಸರ್ ಹನಿ ಬಾಬು ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅವರ ಕುಟುಂಬವು ಒಪ್ಪಿಕೊಂಡರೆ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ಆದೇಶಿಸಿದೆ.
ಕೋವಿಡ್-19 ಸೋಂಕಿನಿಂದಾಗಿ ಬಾಬು ದಾಖಲಾಗಿರುವ ಇಲ್ಲಿಯ ಜಿಟಿ ಆಸ್ಪತ್ರೆಯ ವೈದ್ಯರು ನೇತ್ರ ಅಪಧಮನಿಯ ಪರೀಕ್ಷೆಗಾಗಿ ತಮ್ಮಲ್ಲಿ ಎಂಆರ್ಐ ಯಂತ್ರ ಲಭ್ಯವಿಲ್ಲ ಎಂದು ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಎಸ್.ಜೆ.ಕಾಥಾವಾಲಾ ಮತ್ತು ಎಸ್.ಪಿ.ತಾವಡೆ ಅವರ ಪೀಠವು ಈ ಆದೇಶವನ್ನು ಹೊರಡಿಸಿತು.
ಬಾಬುಗೆ ವೈದ್ಯಕೀಯ ಜಾಮೀನು ನೀಡುವಂತೆ ಆಗ್ರಹಿಸಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದ ಅವರ ಪತ್ನಿ ಜೆನ್ನಿ ರೊವೆನಾ,ಮಧ್ಯಂತರ ಕ್ರಮವಾಗಿ ತನ್ನ ಪತಿಯನ್ನು ಕಪ್ಪು ಶಿಲೀಂಧ್ರ ಸೋಂಕಿನ ತಪಾಸಣೆಗೊಳಪಡಿಸುವಂತೆ ಕೋರಿದ್ದರು.
ಬಾಬು ಅವರ ಕಣ್ಣಿನ ಸೋಂಕು ಕೆನ್ನೆ,ಕಿವಿ ಮತ್ತು ಹಣೆಗೆ ಹರಡಿದ್ದು,ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ ಎಂದು ರೊವೆನಾ ಪರ ವಕೀಲ ಯುಗ್ ಚೌಧರಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾ.ಕಾಥಾವಾಲಾ ಅವರು ಜಿಟಿ ಆಸ್ಪತ್ರೆಯಲ್ಲಿ ಐಸೊಲೇಷನ್ನಲ್ಲಿರುವ ಬಾಬು ಅವರೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿ ಅವರ ಕಣ್ಣಿನ ಸ್ಥಿತಿಯ ಬಗ್ಗೆ ವಿಚಾರಿಸಿದರು. ತನಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಕಣ್ಣಿನ ಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ ಎಂದು ಬಾಬು ತಿಳಿಸಿದರು.
ಈ ಸಂದರ್ಭ ಚೌಧರಿ ಅವರು,ಬಾಬು ಅವರ ಕಣ್ಣಿಗೆ ಎಂ ಆರ್ ಐ ತಪಾಸಣೆಯ ಅಗತ್ಯವಿದೆ ಮತ್ತು ಜಿಟಿ ಆಸ್ಪತ್ರೆಯಲ್ಲಿ ಅದನ್ನು ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವೈದ್ಯರಿಂದ ಇದನ್ನು ಖಚಿತಪಡಿಸಿಕೊಂಡ ನ್ಯಾಯಾಲಯವು ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ಬಾಬುವನ್ನು ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿತು.
ಬಾಬು ಕುಟುಂಬ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾದರೆ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿಲು ಬಯಸಿದ್ದೀರಾ ಎಂದು ನ್ಯಾಯಾಲಯವು ಪ್ರಶ್ನಿಸಿದಾಗ,ಬಾಬು ಜಾಮೀನಿನಲ್ಲಿರುವವರೆಗೆ ಮತ್ತು ರಾಜ್ಯ ಸರಕಾರದ ಸೂಚನೆಗಳನ್ನು ವೈದ್ಯರು ಪಾಲಿಸದಿದ್ದರೆ ವೆಚ್ಚವನ್ನು ಭರಿಸಲು ಕುಟುಂಬವು ಸಿದ್ಧವಿದೆ ಎಂದು ತಿಳಿಸಿದರು.
ಗುರುವಾರ ಬಾಬುವನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆದೇಶಿಸಿದ ನ್ಯಾಯಾಲಯವು, ಅವರಿಗೆ ಚಿಕಿತ್ಸೆಯನ್ನು ನೀಡುವಂತೆ ಮತ್ತು ಜೂ.9ರೊಳಗೆ ವರದಿ ಸಲ್ಲಿಸುವಂತೆ ವೈದ್ಯರಿಗೆ ನಿರ್ದೇಶಿಸಿತು.
ಬಾಬುವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವುದನ್ನು ಎನ್ಐಎ ವಿರೋಧಿಸಿತಾದರೂ ಉಚ್ಚ ನ್ಯಾಯಾಲಯವು ಅದಕ್ಕೆ ಸೊಪ್ಪು ಹಾಕಲಿಲ್ಲ ಎಂದು ತಿಳಿದು ಬಂದಿದೆ.