ಕೋವಿಡ್ ಬಿಕ್ಕಟ್ಟಿನ ನಡುವೆ ಏಳು ವರ್ಷಗಳಲ್ಲಿ ಮೊದಲ ಬಾರಿ ಹೊಸ ಕನಿಷ್ಠ ಮಟ್ಟಕ್ಕೆ ಕುಸಿದ ಮೋದಿ ಜನಪ್ರಿಯತೆ

ಹೊಸದಿಲ್ಲಿ,ಮೇ 19: ಕೊರೋನ ವೈರಸ್ ಸಾಂಕ್ರಾಮಿಕದ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ದರವು ಹೊಸ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಭಾರತದ ಸಿ-ವೋಟರ್ ಮತ್ತು ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸಮೀಕ್ಷೆಗಳು ಹೇಳಿವೆ.
ಸಿ-ವೋಟರ್ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕೇವಲ ಶೇ.37ರಷ್ಟು ಜನರು ಮೋದಿ ಆಡಳಿತವು ತಮಗೆ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ. 2020ರಲ್ಲಿ ಮೋದಿ ಆಡಳಿತದಿಂದ ಶೆ.65ರಷ್ಟು ಜನರು ತೃಪ್ತಿ ಪಟ್ಟುಕೊಂಡಿದ್ದು,ಇದಕ್ಕೆ ಹೋಲಿಸಿದರೆ ಮೋದಿ ಜನಪ್ರಿಯತೆಯಲ್ಲಿ ಭಾರೀ ಕುಸಿತವುಂಟಾಗಿದೆ.
ಈ ವಾರ ಮೋದಿಯವರ ಒಟ್ಟಾರೆ ಜನಪ್ರಿಯತೆ ದರವು ಶೇ.63ರಷ್ಟಿದ್ದು,ಅವರನ್ನು ಮೆಚ್ಚದವರ ಪ್ರಮಾಣ ಶೇ.31ರಷ್ಟಿದೆ ಎಂದು ಹಲವಾರು ವಿಶ್ವ ನಾಯಕರ ಜನಪ್ರಿಯತೆಯ ಮೇಲೆ ನಿಗಾಯಿರಿಸುವ ಮಾರ್ನಿಂಗ್ ಕನ್ಸಲ್ಟ್ ಹೇಳಿದೆ. ಎಪ್ರಿಲ್ನಲ್ಲಿ ಮೋದಿಯವರ ಜನಪ್ರಿಯತೆ ದರವು 22 ಅಂಶಗಳಷ್ಟು ಇಳಿದಿದ್ದು, ಅದು ಅವರ ಜನಪ್ರಿಯತೆಯಲ್ಲಿ ಬೃಹತ್ ಕುಸಿತಕ್ಕೆ ಸಾಕ್ಷಿಯಾಗಿತ್ತು. ಮಾರ್ನಿಂಗ್ ಕನ್ಸಲ್ಟ್ 2019 ಎಪ್ರಿಲ್ನಿಂದ ಮೋದಿಯವರ ಜನಪ್ರಿಯತೆಯ ಮೇಲೆ ನಿಗಾ ಆರಂಭಿಸಿತ್ತು.
ಹೀಗಾಗಿ,ಇವೆರಡೂ ಸಮೀಕ್ಷೆಗಳ ದತ್ತಾಂಶಗಳ ಆಧಾರದಲ್ಲಿ ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೋದಿ ಸರಕಾರದ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದವರ ಸಂಖ್ಯೆ ತೃಪ್ತಿ ವ್ಯಕ್ತಪಡಿಸಿದವರಿಗಿಂತ ಹೆಚ್ಚಾಗಿದೆ.
ಮೋದಿಯವರು ತನ್ನ ವೃತ್ತಿಜೀವನದಲ್ಲಿಯ ಅತ್ಯಂತ ದೊಡ್ಡ ರಾಜಕೀಯ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ಸಿ-ವೋಟರ್ ಸ್ಥಾಪಕ ಯಶವಂತ ದೇಶಮುಖ ವರದಿಯಲ್ಲಿ ಹೇಳಿದ್ದಾರೆ. ಆದರೆ ಮೋದಿಯವರ ಜನಪ್ರಿಯತೆ ದರದಲ್ಲಿ ಕುಸಿತವಾಗಿದ್ದರೂ ಅವರು ಭಾರತೀಯ ರಾಜಕಾರಣದಲ್ಲಿ ಅತ್ಯಂತ ಜನಪ್ರಿಯ ಮುಖವಾಗಿ ಉಳಿದುಕೊಂಡಿದ್ದಾರೆ ಎಂದು ಸಿ-ವೋಟರ್ ದತ್ತಾಂಶಗಳು ತೋರಿಸಿವೆ.
ಕೋವಿಡ್-2ನೇ ಅಲೆಯಿಂದಾಗಿ ದೇಶದಲ್ಲಿಯ ಸ್ಥಿತಿ ಮತ್ತು ಈ ಅವಧಿಯಲ್ಲಿ ತಪ್ಪು ನಿರ್ವಹಣೆ ಮೋದಿ ಸರಕಾರದ ಜನಪ್ರಿಯತೆ ಕುಸಿಯಲು ಕಾರಣವೆಂದು ಈ ವರದಿಗಳು ಹೇಳಿವೆ.