ರೆಮ್‍ಡೆಸಿವಿರ್ ಹೆಸರಿನಲ್ಲಿ ವಂಚನೆ: ವಿದೇಶಿ ಪ್ರಜೆ ಸೇರಿ ಮೂವರ ಬಂಧನ

ಬೆಂಗಳೂರು, ಮೇ 19: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿ, ರೆಮ್‍ಡೆಸಿವಿರ್ ಮತ್ತು ಕೋವಿಡ್ ಔಷಧಗಳನ್ನು ಮಾರಾಟ ಮಾಡುವುದಾಗಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಸೇರಿ ಮೂವರನ್ನು ಕೇಂದ್ರ ವಿಭಾಗದ ಸೆನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಸಂಬಂಧಿಸಿದ ಅಪರಾಧ) ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಪ್ರಜೆ ಎ.ಯೂಸುಫ್(26), ವಿದ್ಯಾರಣ್ಯಪುರದ ಆದಿತ್ಯ ನಗರದ ನಿವಾಸಿ ಇಸ್ಮಾಯಿಲ್ ಖಾದ್ರಿ (43) ಹಾಗೂ ಯಲಹಂಕದ ಸಂತೋಷ್ ಎಂಬವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಇಸ್ಮಾಯಿಲ್ ಖಾದ್ರಿ ಸಿಮ್ ಕಾರ್ಡ್ ವ್ಯಾಪಾರಿಯಾಗಿದ್ದು, ಈತ ಎ.ಯೂಸುಫ್‍ಗೆ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತಲಾ 10 ಸಾವಿರಕ್ಕೆ ಮಾರಾಟ ಮಾಡಿದ್ದ. ಜತೆಗೆ, ನಕಲಿ ಸಿಮ್ ಕಾರ್ಡ್‍ಗಳನ್ನು ಮಾರಾಟ ಮಾಡಿದ್ದ. ಇವುಗಳನ್ನು ಉಪಯೋಗಿಸಿಕೊಂಡು ಯೂಸುಫ್ ಜನರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕಿಸಿ ಕೋವಿಡ್ ಔಷಧ ನೆಪದಲ್ಲಿ ವಂಚನೆ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಆರೋಪಿಗಳಿಂದ 110 ಸಿಮ್ ಕಾರ್ಡ್‍ಗಳು, 10 ಬ್ಯಾಂಕ್ ಖಾತೆ ಹಾಗೂ 4 ಲಕ್ಷ ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್, ಹಾರ್ಡ್‍ಡಿಸ್ಕ್ ವಶಕ್ಕೆ ಪಡೆಯಲಾಗಿದೆ ಎಂದೂ ಪೊಲೀಸರು ತಿಳಿಸಿದರು.







