ಪಡುಬಿದ್ರಿ: ಟಗ್ ತೆರವಿಗೆ ಸಿದ್ಧತೆ

ಪಡುಬಿದ್ರಿ: ಕಳೆದ ವಾರ ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಾಡಿಪಟ್ಣ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದ ಟಗ್ ತೆರವಿಗೆ ಬೇಕಾದ ಸಿದ್ಧತೆಗಳನ್ನು ನಡೆಸಿದೆ.
ಎಮ್‍ಆರ್‍ಪಿಎಲ್ ಕ್ರೂಡ್ ಆಯಿಲ್ ಜೆಟ್ಟಿಗಾಗಿ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿದ್ದ ಗುಜರಾತ್ ಮೂಲದ ಅಲಯನ್ಸ್‍ಗೆ ಸೇರಿದ ಈ ಟಗ್ ನವಮಂಗಳೂರು ಬಂದರು ಬಳಿ 4 ನಾಟಿಕಲ್ ದೂರದಲ್ಲಿ ಚಂಡುಮಾರುತ ಪ್ರಭಾವಕ್ಕೆ ಸಿಲುಕಿ ಪಡುಬಿದ್ರಿ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಟಗ್‍ನಲ್ಲಿ 8 ಜನರಿದ್ದು, ಮೂವರು ಈಜಿ ದಡ ಸೇರಿದ್ದರೆ ಇಬ್ಬರ ಶವ ಪತ್ತೆಯಾಗಿತ್ತು. ಆದರೆ ಉಳಿದ ಮೂವರು ಏನಾಗಿದ್ದಾರೆಂದು ಈವರೆಗೂ ಮಾಹಿತಿ ಇಲ್ಲ. ಸ್ಥಳೀಯರ ಪ್ರಕಾರ ಟಗ್‍ನ ಕ್ಯಾಬಿನ್ ಒಳಗಡೆ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಬಿಲಾಲ್ ಮೊಯ್ದಿನ್ ನೇತೃತ್ವದ ಮಂಗಳೂರು ಬದ್ರಿಯಾ ತಜ್ಞರ ತಂಡ ತೆರವು ಕಾರ್ಯಾಚರಣೆ ಬುಧವಾರ ಆರಂಭಿಸಿದೆ. ಬೃಹತ್ ಯಂತ್ರದ ಮೂಲಕ ಎಳೆದು ಟಗ್‍ನ್ನು ತೆರವುಗೊಳಿಸಿ ಬಳಿಕ ಮಂಗಳೂರಿನಿಂದ ಸಮುದ್ರ ಮೂಲಕ ಆಗಮಿಸುವ ಬೃಹತ್ ಬೋಟ್ ಮೂಲಕ ಸಮುದ್ರಕ್ಕೆ ಎಳೆದು ಅಲ್ಲಿಂದ ಮಂಗಳೂರು ಹಳೇ ಬಂದರಿಗೆ ಎಳೆದುಕೊಂಡು ಹೋಗಲಾಗುವುದು.ಬುಧವಾರ ಸಂಜೆವರೆಗೆ ಸಮುದ್ರ ಶಾಂತವಿದ್ದು, ಗುರುವಾರವೂ ಇದೇ ರೀತಿ ಇದ್ದರೆ ಕಾರ್ಯಾಚರಣೆ ಒಂದೇ ದಿನದಲ್ಲಿ ಮುಗಿಯಲಿದೆ ಎಂದು ಎಂದು ಕಾರ್ಯಾಚರಣೆಯ ಬಗ್ಗೆ ಬಿಲಾಲ್ ಮೊಯ್ದಿನ್ ಮಾಹಿತಿ ನೀಡಿದರು.
ಟಗ್‍ನಲ್ಲಿ ಡಿಸೇಲ್: ಮೀನುಗಾರರ ಆತಂಕ: ಈ ಟಗ್ 1000 ಲೀ ತುಂಬಿಸುವ ಸಾಮಥ್ರ್ಯ ಇದೆ. ಕಳೆದ ನಾಲ್ಕು ದಿನಗಳಿಂದ ಟಗ್‍ನಲ್ಲಿದ್ದ ಅಲ್ಪಸ್ವಲ್ಪ ಡೀಸಿಲ್ ಹೊರ ಚೆಲ್ಲಿದ್ದು, ಸಮುದ್ರ ತೀರದಲ್ಲಿ ವಾಸನೆಯುಕ್ತವಾಗಿ ಕಂಡುಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾಹಿತಿ ನೀಡಿದ್ದಾರೆ.







