ಕೊರೊನಾ ಸೋಂಕನ್ನು ಸರಕಾರ ಗಂಭೀರವಾಗಿ ಪರಿಗಣಿಸದಿರುವುದೇ ಇಂದಿನ ದುಸ್ಥಿತಿಗೆ ಕಾರಣ- ಕಾಂಗ್ರೆಸ್ ಆರೋಪ

ಕಾರ್ಕಳ : ಕೊರೋನ ಎರಡನೇ ಅಲೆ ಪರಿಣಾಮವನ್ನು ತಜ್ಞರು ಮೊದಲೇ ತಿಳಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಅದನ್ನು ಗಂಭೀರ ವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುವಂತಾಯಿತು ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆರೋಪಿಸಿದರು.
ಅವರು ಬುಧವಾರ ಕಾರ್ಕಳ ಕಾಂಗ್ರೆಸ್ ಕಚೇರಿಯ ಮುಂಭಾಗ ಕೇಂದ್ರ-ರಾಜ್ಯ ಸರಕಾರದ ವಿರುದ್ಧ ನಡೆದ ಸಾಂಕೇತಿಕ ಪ್ರತಿಭಟನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಲಸಿಕೆ ಅಲಭ್ಯಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಅತ್ಯಧಿಕವಾಗಿದ್ದರೂ, ಪ್ರಾರಂಭದಲ್ಲಿ ವಿದೇಶಗಳಿಗೆ ರವಾನೆ ಮಾಡಿರುವುದರಿಂದ ಇಂದು ದೇಶದಲ್ಲಿ ಲಸಿಕೆ ಅಭಾವ ತಲೆದೋರಿದೆ. ಇದಕ್ಕೆ ಸರಕಾರದ ತಪ್ಪು ನಿರ್ಧಾರವೇ ಕಾರಣವೆಂದರು.
ಆಸ್ಪತ್ರೆಗಳಿಗೆ ಭೇಟಿ ನೀಡಲಿ
ಕಳೆದ ಬಾರಿಯೊಮ್ಮೆ ಕಾರ್ಕಳ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಕಾಟಾಚಾರಕ್ಕೆ ಎಂಬಂತೆ ಮೊನ್ನೆ ಒಮ್ಮೆ ಬಂದು ಹೋಗಿದ್ದಾರೆ. ರಾಜ್ಯದ ಬಿಜೆಪಿ ಸಂಸದರೂ ಕೇಂದ್ರ ಸರಕಾರದಿಂದ ಯಾವೊಂದು ವಿಶೇಷ ಅನುದಾನ ತರಿಸು ಪ್ರಯತ್ನ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಂಜುನಾಥ ಪೂಜಾರಿ ಅವರು ಕಾರ್ಕಳ ಶಾಸಕರು, ತಾಲೂಕಿನಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲಿಸುವ ಕಾರ್ಯ ಮಾಡಬೇಕೆಂದರು.
ತಾಲೂಕು ವೈದ್ಯಾಧಿಕಾರಿಯವರು ಕೊರೋನಾ ಸೋಂಕಿತರ ಸಂಖ್ಯೆ ನೀಡಿದ್ದು ಅದರಲ್ಲಿ ಮೃತರಾದವರ ಮತ್ತು ಪರಿಹಾರ ವಿತರಣೆ ಕುರಿತು ಪ್ರಸ್ತಾಪ ಮಾಡಲೇ ಇಲ್ಲ. ಕಾರ್ಕಳದಲ್ಲಿ ಮೂರು ಬಾರಿ ಶಾಸಕರಾದ ಸುನಿಲ್ ಕುಮಾರ್, ಎರಡು ಬಾರಿ ಸಂಸದೆಯಾದ ಶೋಭಾ ಕರಂದ್ಲಾಜೆ ಕೋರೊನಾ ನಿಯಂತ್ರಣ ಮಾಡುವಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸರಕಾರದ ಆಡಳಿತ ವೈಫಲ್ಯ-ಸದಾಶಿವ ದೇವಾಡಿಗ
ಕೊರೋನ ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಯಾವಾಗ ಲಸಿಕೆ ದೊರೆಯಲಿದೆ ಎಂಬ ಕುರಿತು ಸ್ಪಷ್ಟತೆಯಿಲ್ಲ. ಆಸ್ಪತ್ರೆಗೆ ಮೂಲಭೂತ ಸೌಕರ್ಯ ಒದಗಿಸುವಲ್ಲೂ ಸರಕಾರ ಮುತುವರ್ಜಿ ವಹಿಸಿಲ್ಲ. ಇದೆಲ್ಲ ಸರಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಆರೋಪಿಸಿದರು.
ಮಾಜಿ ತಾ.ಪಂ. ಸದಸ್ಯ ಸುಧಾಕರ್ ಶೆಟ್ಟಿ, ಪುರಸಭಾ ಸದಸ್ಯ ಅಸ್ಪಕ್ ಅಹಮ್ಮದ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಡಿಸಿಸಿ ಉಪಾಧ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಾರ್ಜ್ ಕ್ಯಾಸೊಲಿನೋ, ಕಾಂಗ್ರೆಸ್ ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಉದಯ ಶೆಟ್ಟಿ ಕುಕ್ಕಂದೂರು, ಅಣ್ಣಪ್ಪ ನಕ್ರೆ, ಅನಿತಾ ಡಿʼ ಸೋಜಾ ಮತ್ತಿತರರು ಈ ಸಂದರ್ಭದಲ್ಲಿದ್ದರು.







