ಕೋವಿಡ್ ಎರಡನೇ ಅಲೆಗೆ 40ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಲಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 19: ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ 40ಕ್ಕೂ ಅಧಿಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಿಧನರಾದ ಗರ್ಭಿಣಿಯೂ ಆಗಿದ್ದ, 28 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಮಿಲಿ ಸೇರಿದಂತೆ ಹಿಂದಿನ ಎಪ್ರಿಲ್ 1ರಿಂದ ಮೇ 13ರ ನಡುವೆ 40ಕ್ಕೂ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ಕಳೆದುಕೊಂಡಿದೆ.
ಮತ್ತೊಂದೆಡೆ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ 40ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳಲ್ಲಿ, ನಾಲ್ವರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, 27 ಮಂದಿಗೆ ಯಾವುದೇ ಇತರೆ ರೋಗ ಲಕ್ಷಣಗಳು ಇರಲಿಲ್ಲ ಎಂದು ದಾಖಲೆಗಳು ತಿಳಿಸಿವೆ.
ಇನ್ನು, ಪೊಲೀಸ್ ಇಲಾಖೆಯ ಆಂತರಿಕ ದಾಖಲೆಯ ಪ್ರಕಾರ, 4,203 ಸಿಬ್ಬಂದಿ, ಅಥವಾ ಒಟ್ಟು ಪೊಲೀಸ್ ಪಡೆಯ ಶೇ.4ರಷ್ಟು ಸಿಬ್ಬಂದಿ 43 ದಿನಗಳಲ್ಲಿ ಸೋಂಕಿಗೆ ಗುರಿಯಾಗಿದ್ದು, ಈ ಪೈಕಿ 1,508 ಸಕ್ರಿಯ ಪ್ರಕರಣಗಳಿವೆ.
ಈಗಾಗಲೇ ಬೆಂಗಳೂರು ನಗರ ಪೊಲೀಸರಲ್ಲಿ 1,439 ಸೋಂಕು ಪ್ರಕರಣಗಳು ದೃಢಪಟ್ಟರೆ, ಮೈಸೂರು-257 ಮತ್ತು ತುಮಕೂರು-216 ಪ್ರಕರಣಗಳು ದಾಖಲಾಗಿವೆ. ಬಳ್ಳಾರಿ-148, ಕಲಬುರ್ಗಿ140, ಹಾಸನ-123 ಪ್ರಕರಣಗಳು ವರದಿಯಾಗಿವೆ.
ಇಲಾಖೆಯ ಆತಂಕಕಾರಿ ಮಾಹಿತಿ ಅನ್ವಯ ಬೆಂಗಳೂರು ನಗರ ಪೊಲೀಸರು ಹೆಚ್ಚಾಗಿ ಕೋವಿಡ್ಗೆ ಬಲಿಯಾಗಿದ್ದಾರೆ. ಈಗಾಗಲೇ ವರದಿಯಾಗಿರುವ 41 ಸಾವುಗಳ ಪೈಕಿ 13 ಸಾವುಗಳು ಬೆಂಗಳೂರಿನಲ್ಲೇ ಸಂಭವಿಸಿವೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್, ಲಸಿಕೆ ಪಡೆದಿರುವ ಕಾರಣದಿಂದಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಯ ಸಾವಿನ ಪ್ರಮಾಣ ತಗ್ಗಿದೆ. ಅಲ್ಲದೆ, ಈ ಹಿಂದಿನ ಕೋವಿಡ್ ಸಂದರ್ಭದಲ್ಲಿ ಸರಿ ಸುಮಾರು 103 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದರು.
ರಾಜ್ಯದ 87,917 ಪೊಲೀಸರ ಪೈಕಿ ಶೇಕಡ 96ರಷ್ಟು ಅಂದರೆ 84,924 ಜನರು ಮೊದಲ ಲಸಿಕೆ ಪಡೆದಿದ್ದರೆ. ಇನ್ನು 72,648 ಪೊಲೀಸ್ ಸಿಬ್ಬಂದಿ ಎರಡನೇ ಡೋಸ್ ಪಡೆದಿದ್ದಾರೆ. ಉಳಿದಿರುವ 2,993 ರಲ್ಲಿ 2,557 ಮಂದಿ ಲಸಿಕೆಗೆ ವೈದ್ಯಕೀಯವಾಗಿ ಅನರ್ಹರಾಗಿದ್ದಾರೆ. 436 ಸಿಬ್ಬಂದಿ ಇನ್ನೂ ಲಸಿಕೆ ಪಡೆದಿಲ್ಲ ಎಂದು ಮಾಹಿತಿ ನೀಡಿದರು.







