ಗಾಝಾ ಮೇಲೆ ಮುಂದುವರಿದ ಇಸ್ರೇಲ್ ದಾಳಿ: ಕನಿಷ್ಠ 8 ಫೆಲೆಸ್ತೀನೀಯರ ಸಾವು

ಗಾಝಾ ನಗರ (ಫೆಲೆಸ್ತೀನ್), ಮೇ 19: ಫೆಲೆಸ್ತೀನ್ ಗೆ ಸೇರಿದ ಗಾಝಾ ಪಟ್ಟಿಯ ಮೇಲೆ ಬಾಂಬ್ ದಾಳಿ ನಡೆಸುವುದನ್ನು ಇಸ್ರೇಲ್‌ನ ಯುದ್ಧ ವಿಮಾನಗಳು ಬುಧವಾರವೂ ಮುಂದುವರಿಸಿದವು. ಹಲವು ಜನವಸತಿ ಕಟ್ಟಡಗಳು ಧರಾಶಾಹಿಯಾಗಿದ್ದು, ಓರ್ವ ಪತ್ರಕರ್ತ ಸೇರಿದಂತೆ ಕನಿಷ್ಠ ನಾಲ್ವರು ಫೆಲೆಸ್ತೀನೀಯರು ಹತರಾಗಿದ್ದಾರೆ.
ದಕ್ಷಿಣ ಇಸ್ರೇಲ್‌ನ ನಗರಗಳತ್ತ ಫೆಲೆಸ್ತೀನಿ ಗುಂಪುಗಳು ಹೆಚ್ಚಿನ ರಾಕೆಟ್ ದಾಳಿಗಳನ್ನು ನಡೆಸಿದ ಬೆನ್ನಿಗೇ ಇಸ್ರೇಲ್ ಹೊಸದಾಗಿ ದಾಳಿ ನಡೆಸಿದೆ. ಇದಕ್ಕೂ ಮೊದಲು, ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್ನಲ್ಲಿ ಪ್ರತಿಭಟನೆಗಳು ಮತ್ತು ಮುಷ್ಕರ ನಡೆದವು.
ಈ ಸಂದರ್ಭದಲ್ಲಿ ಇಸ್ರೇಲ್ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಇನ್ನೂ ನಾಲ್ವರು ಫೆಲೆಸ್ತೀನೀಯರು ಮೃತಪಟ್ಟರು ಹಾಗೂ ಹಲವಾರು ಮಂದಿ ಗಾಯಗೊಂಡರು.
ಮೇ 10ರಂದು ವಲಯದಲ್ಲಿ ಗಾಝಾದಲ್ಲಿ ಹಿಂಸೆ ಸ್ಫೋಟಿಸಿದಂದಿನಿಂದ 63 ಮಕ್ಕಳು ಸೇರಿದಂತೆ ಕನಿಷ್ಠ 219 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಸುಮಾರು 1,500 ಫೆಲೆಸ್ತೀನೀಯರು ಗಾಯಗೊಂಡಿದ್ದಾರೆ. ಅದೇ ವೇಳೆ, ಇಸ್ರೇಲ್ ಮೇಲೆ ಹಮಾಸ್ ನಡೆಸಿದ ರಾಕೆಟ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 12 ಇಸ್ರೇಲಿಗರು ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 300 ಮಂದಿ ಗಾಯಗೊಂಡಿದ್ದಾರೆ.
ಸಂಘರ್ಷವು 10ನೇ ದಿನವನ್ನು ಪ್ರವೇಶಿಸಿದರೂ ಇಸ್ರೇಲ್ ಮತ್ತು ಗಾಝಾದ ಹಮಾಸ್ ಆಡಳಿತಗಾರರ ನಡುವೆ ಯುದ್ಧವಿರಾಮವನ್ನು ಏರ್ಪಡಿಸುವ ಪ್ರಯತ್ನಗಳು ಹೆಚ್ಚಿನ ಯಶಸ್ಸನ್ನು ಕಂಡಿಲ್ಲ.
ಗಾಝಾದಲ್ಲಿ 50, ಇಸ್ರೇಲ್ ನಲ್ಲಿ 3 ಶಾಲೆಗಳಿಗೆ ಹಾನಿ
ಕಳೆದ ವಾರ ಇಸ್ರೇಲ್ ನಡೆಸಿದ ವಾಯು ದಾಳಿಗಳಲ್ಲಿ ಗಾಝಾದಲ್ಲಿ 50 ಶಾಲೆಗಳು ಹಾನಿಗೀಡಾಗಿವೆ ಎಂದು ಸೇವ್ ದ ಚಿಲ್ಡ್ರನ್ ತಿಳಿಸಿದೆ. ಹಾಗಾಗಿ, 41,897 ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ.
ಗಾಝಾದಿಂದ ನಡೆಸಲಾದ ರಾಕೆಟ್ ದಾಳಿಗಳಲ್ಲಿ ಇಸ್ರೇಲ್ನಲ್ಲಿ ಮೂರು ಶಾಲೆಗಳು ಹಾನಿಗೊಂಡಿವೆ ಎಂದು ಯುನಿಸೆಫ್ ತಿಳಿಸಿದೆ
ಹಮಾಸನ್ನು ಜಯಿಸುವ ಆಯ್ಕೆ ಯಾವಾಗಲೂ ಮುಕ್ತ: ನೆತನ್ಯಾಹು
ಟೆಲ್ ಅವೀವ್ (ಇಸ್ರೇಲ್): ಗಾಝಾ ಪಟ್ಟಿಯ ಮೇಲೆ ನಡೆಸಲಾಗುತ್ತಿರುವ ಬಾಂಬ್ ದಾಳಿಯು ಹಮಾಸನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಹೇಳಿದ್ದಾರೆ. ಆದರೆ ಅಲ್ಲಿನ ಹಮಾಸ್ ಆಡಳಿತವನ್ನು ಸೋಲಿಸುವ ಸೇನಾ ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಲಿಲ್ಲ.
ಅವರೊಂದಿಗೆ ವ್ಯವಹರಿಸಲು ಕೇವಲ ಎರಡು ದಾರಿಗಳಿವೆ ಎಂದು ಟೆಲ್ ಅವೀವ್ನಲ್ಲಿ ವಿದೇಶಿ ರಾಯಭಾರಿಗಳ ಗುಂಪೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಹಮಾಸ್ ಬಗ್ಗೆ ಅವರು ಹೇಳಿದರು.
ಒಂದೋ ಅವರನ್ನು ಜಯಿಸಬೇಕು ಅಥವಾ ಅವರನ್ನು ತಡೆಯಬೇಕು. ಅವರನ್ನು ಜಯಿಸುವುದು ಯಾವತ್ತೂ ಮುಕ್ತ ಸಾಧ್ಯತೆಯಾಗಿಯೇ ಇದೆ. ಈಗ ನಾವು ಅವರನ್ನು ಬಲವಂತವಾಗಿ ತಡೆಯುವ ಕೆಲಸದಲ್ಲಿ ತೊಡಗಿದ್ದೇವೆ. ಆದರೆ, ನಾವು ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿದ್ದೇವೆ ಎಂದರು.







