ಅಸ್ಸಾಂ: ಜೈಲಿನಲ್ಲಿದ್ದ 52 ಖೈದಿಗಳಿಗೆ ಕೊರೋನ ಸೋಂಕು

ಗುವಾಹಟಿ, ಮೇ 19: ದಿಬ್ರುಗಢ ಸೆಂಟ್ರಲ್ ಜೈಲಿನಲ್ಲಿರುವ 52 ಖೈದಿಗಳಿಗೆ ಕೊರೋನ ಸೋಂಕು ದೃಢಪಟ್ಟಿದ್ದು ಅವರನ್ನು ಜೈಲಿನ ಆವರಣದಲ್ಲೇ ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಜೈಲಿನಲ್ಲಿರುವ 530 ಖೈದಿಗಳಲ್ಲಿ 223 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 52 ಜನರಲ್ಲಿ ಸೋಂಕು ದೃಢಪಟ್ಟಿದೆ. ಉಳಿದವರಿಗೂ ಶೀಘ್ರ ಪರೀಕ್ಷೆ ನಡೆಸಲಾಗುವುದು. ಸೋಂಕು ದೃಢಪಟ್ಟವರನ್ನು ಜೈಲಿನ ಆವರಣದೊಳಗೆ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ವರದಿಯಾಗಿದೆ.
ಅಸ್ಸಾಂನಲ್ಲಿ ಅತ್ಯಧಿಕ ಸೋಂಕು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ದಿಬ್ರುಗಢ ಸೇರಿದೆ. ಅಸ್ಸಾಂನಲ್ಲಿ 6 ಸೆಂಟ್ರಲ್ ಜೈಲು, 22 ಜಿಲ್ಲಾ ಕಾರಾಗೃಹ ಸಹಿತ ಒಟ್ಟು 31 ಜೈಲುಗಳಿವೆ. ಕೊರೋನ ಸೋಂಕಿನ ಪ್ರಥಮ ಅಲೆಯ ಸಂದರ್ಭ 2,5000ಕ್ಕೂ ಅಧಿಕ ಖೈದಿಗಳಿಗೆ ಸೋಂಕು ತಗುಲಿತ್ತು. ಈ ಬಾರಿ ಸಮಸ್ಯೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಂಡಿರುವ ಜೈಲು ಅಧಿಕಾರಿಗಳು, ಖೈದಿಗಳಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ ಜೈಲು ಆವರಣದೊಳಗೆ ಪ್ರತ್ಯೇಕ ವಾಸದ ವ್ಯವಸ್ಥೆ ರೂಪಿಸಿದ್ದಾರೆ.