ಸ್ಟ್ಯಾನ್ ಸ್ವಾಮಿ ಪ್ರಕರಣದ ಪರಿಶೀಲನೆಗೆ ಸಮಿತಿ ರೂಪಿಸಲು ಹೈಕೋರ್ಟ್ ಸೂಚನೆ
ಮುಂಬೈ, ಮೇ 19: ಎಲ್ಗರ್ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಟ್ಯಾನ್ ಸ್ವಾಮಿಯನ್ನು ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸುವಂತೆ ಮತ್ತು ಗುರುವಾರ ಅವರ 10:30ಕ್ಕೆ ಅವರ ಆರೋಗ್ಯ ಪರಿಶೀಲಿಸುವಂತೆ ಬಾಂಬೆ ಹೈಕೋರ್ಟ್ ತಲೋಜಾ ಜೈಲು ಅಧಿಕಾರಿಗಳಿಗೆ ಬುಧವಾರ ಸೂಚಿಸಿದೆ.
ಸ್ವಾಮಿಯ ಆರೋಗ್ಯಸ್ಥಿತಿ ಪರಿಶೀಲನೆಗೆ ನರಶಾಸ್ತ್ರಜ್ಞರು, ಗಂಟಲು-ಮೂಗು-ಶ್ರವಣ ತಜ್ಞರು, ಮೂಳೆ ವೈದ್ಯರು, ಶಸ್ತ್ರಚಿಕಿತ್ಸಕರು ಹಾಗೂ ಇತರ ವೈದ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಮತ್ತು ವೈದ್ಯಕೀಯ ಪರಿಶೀಲನೆಯ ಕುರಿತ ವರದಿಯನ್ನು ಹೈಕೋರ್ಟ್ಗೆ ಮೇ 21ರೊಳಗೆ ಸಲ್ಲಿಸುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ನ್ಯಾಯಪೀಠ ಸೂಚಿಸಿದೆ.
ಅಲ್ಲದೆ, ಮೇ 21ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎಲ್ಗರ್ ಪ್ರಕರಣದ ವಿಚಾರಣೆ ನಡೆಯುವಾಗ ಸ್ವಾಮಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
2017ರಲ್ಲಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದರಿಂದ ಮರುದಿನ ನಡೆದ ಭೀಮಾ-ಕೊರೆಗಾಂವ್ ಸ್ಮರಣಾರ್ಥದ ಕಾರ್ಯಕ್ರಮದಲ್ಲಿ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದು, ಸ್ವಾಮಿ, ಸುಧಾ ಭಾರದ್ವಾಜ್, ವರವರ ರಾವ್ ಸಹಿತ ಹಲವು ಹೋರಾಟಗಾರರನ್ನು ಬಂಧಿಸಲಾಗಿದೆ.
ಜಾಮೀನು ಕೋರಿ ಸ್ವಾಮಿ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.