ದೇಶದಲ್ಲಿ 20 ದಿನಗಳಲ್ಲಿ 75 ಸಾವಿರ ಮಂದಿ ಕೋವಿಡ್‌ಗೆ ಬಲಿ

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೇ ತಿಂಗಳ ಮೊದಲ 19 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 75 ಸಾವಿರದ ಗಡಿ ದಾಟಿದೆ. ಇದುವರೆಗಿನ ಗರಿಷ್ಠ ಸಾವು ಏಪ್ರಿಲ್‌ನಲ್ಲಿ ದಾಖಲಾಗಿತ್ತು. ಏಪ್ರಿಲ್‌ನಲ್ಲಿ 49 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದರು.
ಇದಕ್ಕೂ ಹಿಂದಿನ ಮೂರು ತಿಂಗಳಲ್ಲಿ ದೇಶದಲ್ಲಿ ಸೋಂಕಿಗೆ ಸರಾಸರಿ 6 ಸಾವಿರ ಮಂದಿ ಬಲಿಯಾಗಿದ್ದರು. ಮೊದಲ ಅಲೆಯ ಉತ್ತುಂಗದ ವೇಳೆ ಅಂದರೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಗರಿಷ್ಠ ಅಂದರೆ 33 ಸಾವಿರ ಮಂದಿ ಒಂದೇ ತಿಂಗಳಲ್ಲಿ ಸೋಂಕಿಗೆ ಬಲಿಯಾಗಿದ್ದರು.
ದೇಶದಲ್ಲಿ ಬುಧವಾರ ಹೊಸ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆ ಕಂಡು 2,76,476ಕ್ಕೇರಿದ್ದರೂ, ಸತತ ಮೂರನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿಯೊಳಗೇ ಇದೆ. 3882 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಮಿಳುನಾಡು 34,895 ಹೊಸ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ತಲಾ 30 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾದ ಕರ್ನಾಟಕ ಮತ್ತು ಮಹಾರಾಷ್ಟ್ರ 2 ಹಾಗೂ 3ನೇ ಸ್ಥಾನದಲ್ಲಿವೆ. 14 ರಾಜ್ಯಗಳಲ್ಲಿ ಸಾವಿನ ಸಂಖ್ಯೆ 100ಕ್ಕೂ ಅಧಿಕ ಇದೆ. ಮಹಾರಾಷ್ಟ್ರದಲ್ಲಿ 594 ಹಾಗೂ ಕರ್ನಾಟಕದಲ್ಲಿ 468 ಮಂದಿ ಕೋವಿಡ್ ಸಂಬಂಧಿ ಸಾವು ಸಂಭವಿಸಿದೆ.
ಮೇ ಮೊದಲ ವಾರಕ್ಕೆ ಹೋಲಿಸಿದರೆ, ಎರಡನೇ ಅಲೆ ಪೂರ್ವಾಭಿಮುಖವಾಗಿ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ಬಹುತೇಕ ಪೂರ್ವ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಪಶ್ಚಿಮ ರಾಜ್ಯಗಳಲ್ಲಿ ಇಳಿಮುಖವಾಗುತ್ತಿದೆ. ಕೇರಳ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ತಮಿಳುನಾಡು ಹಾಗೂ ಆಂಧ್ರ ಕರಾವಳಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಪೂರ್ವ ರಾಜ್ಯಗಳಾದ ಅಸ್ಸಾಂ, ಬಂಗಾಳ, ತ್ರಿಪುರಾ ಮತ್ತು ಒಡಿಶಾದಲ್ಲೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.