ಫೆಲೆಸ್ತೀನ್ ಧ್ವಜ ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದ ಪೊಗ್ಬಾ,ಅಮದ್ ಡಿಯಲ್ಲೊ

photo: twiiter (@hzomlot)
ಲಂಡನ್: ಓಲ್ಡ್ ಟ್ರಾಫರ್ಡ್ ಪಿಚ್ನಲ್ಲಿ ಫಲ್ಹಾಮ್ ವಿರುದ್ಧ ಪಂದ್ಯ 1-1 ಗೋಲುಗಳಿಂದ ಡ್ರಾ ನಲ್ಲಿ ಕೊನೆಗೊಂಡ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಆಟಗಾರರಾದ ಪೌಲ್ ಪೊಗ್ಬಾ ಹಾಗೂ ಅಮದ್ ಡಿಯಲ್ಲೊ ಅವರು ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದರು ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಋತುವಿನಲ್ಲಿ ತವರು ನೆಲದಲ್ಲಿ ನಡೆದ ಕೊನೆಯ ಪಂದ್ಯದ ನಂತರ ಸಾಂಪ್ರದಾಯಿಕ ಗೌರವ ಸ್ವೀಕಾರದ ಸಮಯದಲ್ಲಿ ಆಟಗಾರರು ಪಿಚ್ನ ಸುತ್ತಲೂ ನಡೆದುಕೊಂಡು ಹೋಗುತ್ತಿದ್ದಾಗ ಪೊಗ್ಬಾ ಅವರಿಗೆ ಅಭಿಮಾನಿಯೊಬ್ಬ ಧ್ವಜವನ್ನು ನೀಡಿದ.
ಫ್ರೆಂಚ್ ವಿಶ್ವಕಪ್ ವಿಜೇತ ಪೊಗ್ಬಾ ಹಾಗೂ ಐವೊರಿಯನ್ ವಿಂಗರ್ ಡಿಯಲ್ಲೊ ಅವರು ಫೆಲೆಸ್ತೀನ್ ಅನ್ನು ಬೆಂಬಲಿಸಿ ಧ್ವಜವನ್ನು ಪ್ರದರ್ಶಿಸಿದರು. ಕೊರೋನವೈರಸ್ ನಿರ್ಬಂಧಗಳನ್ನು ತೆಗೆದು ಹಾಕಿದ ನಂತರ ಸುಮಾರು 10,000 ಫುಟ್ಬಾಲ್ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದರು.
ಗಾಝಾದ ಮೇಲೆ ಇಸ್ರೇಲ್ ನಡೆಸಿದ ತೀವ್ರ ಬಾಂಬ್ ದಾಳಿಯ ಕಾರ್ಯಾಚರಣೆಯಲ್ಲಿ 61 ಮಕ್ಕಳು ಸೇರಿದಂತೆ 213 ಫೆಲೆಸ್ತೀನ್ ಜನರು ಸಾವನ್ನಪ್ಪಿದ್ದಾರೆ ಹಾಗೂ ಹಮಾಸ್ ವಿರುದ್ಧದ ಹೋರಾಟದಲ್ಲಿ ಒಂದು ವಾರದಲ್ಲಿ ಗಾಝಾದಲ್ಲಿ 1,400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಫೆಲೆಸ್ತೀನಿಯರನ್ನು ಬೆಂಬಲಿಸಿ ಸಾವಿರಾರು ಪ್ರತಿಭಟನಾಕಾರರು ಲಂಡನ್, ಬರ್ಲಿನ್, ಮ್ಯಾಡ್ರಿಡ್ ಮತ್ತು ಪ್ಯಾರಿಸ್ ಸೇರಿದಂತೆ ಪ್ರಮುಖ ಯುರೋಪಿಯನ್ ನಗರಗಳಲ್ಲಿ ಶನಿವಾರ ಮೆರವಣಿಗೆ ನಡೆಸಿದರು.