ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕುಸಿತ : ಅಂಕಿ ಅಂಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19ನಿಂದ ದೊಡ್ಡಸಂಖ್ಯೆಯ ರೋಗಿಗಳು ಸಾಯುತ್ತಿದ್ದರೂ, ಸತತ ಆರನೇ ದಿನ ಲಸಿಕೆ ನೀಡಿಕೆಯಲ್ಲಿ ಕುಸಿತ ಕಂಡುಬಂದಿದೆ. ಕೋವಿನ್ ಪೋರ್ಟೆಲ್ ಮಾಹಿತಿ ಪ್ರಕಾರ ಬುಧವಾರ ಕೇವಲ 11.5 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ನಿರಂತರವಾಗಿ ಲಸಿಕೆ ನೀಡಿಕೆ ಮಟ್ಟ ಇಳಿಯುತ್ತಲೇ ಇದ್ದು, ಸೋಮವಾರ 15 ಲಕ್ಷ, ಮಂಗಳವಾರ 13 ಲಕ್ಷ ಹಾಗೂ ಬುಧವಾರ 12 ಲಕ್ಷಕ್ಕೆ ಇಳಿದಿದೆ ಎಂದು ಅಧಿಕೃತ ಅಂಕಿ ಅಂಶ ತಿಳಿಸಿದೆ.
ಪೋರ್ಟೆಲ್ನಲ್ಲಿ ಪಟ್ಟಿ ಮಾಡಲಾದ 754 ಜಿಲ್ಲೆಗಳ ಪೈಕಿ 92 ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ಸಂಪೂರ್ಣ ಸ್ಥಗಿತವಾಗಿದೆ. ಗುಜರಾತ್ನ 41 ಜಿಲ್ಲೆಗಳ ಪೈಕಿ ಕೇವಲ 5 ಜಿಲ್ಲೆಗಳಲ್ಲಿ ಹಾಗೂ ತೆಲಂಗಾಣದ 33 ಜಿಲ್ಲೆಗಳ ಪೈಕಿ ಕೇವಲ 3 ಜಿಲ್ಲೆಗಳಲ್ಲಿ ಬುಧವಾರ ಲಸಿಕೆ ನೀಡಲಾಗಿದೆ. ಉಳಿದಂತೆ ದೇಶದ ಇತರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 26 ಜಿಲ್ಲೆಗಳಲ್ಲಿ ಲಸಿಕೆ ನೀಡಿಕೆ ಶೂನ್ಯಕ್ಕೆ ತಲುಪಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಈಗಾಗಲೇ ಸುಮಾರು 3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದು, ಅನಧಿಕೃತವಾಗಿ ಈ ಸಾವಿನ ಸಂಖ್ಯೆ ಇನ್ನೂ ಅಧಿಕ ಎಂದು ಹೇಳಲಾಗುತ್ತಿದೆ. ದೇಶವನ್ನು ಸಂಭಾವ್ಯ ಮೂರನೇ ಅಲೆಯ ಹೊಡೆತದಿಂದ ತಪ್ಪಿಸಲು ಲಸಿಕೆ ನೀಡಿಕೆ ಅತ್ಯುತ್ತಮ ಮಾರ್ಗವಾಗಿದ್ದರೂ, ಲಸಿಕೆ ನೀಡಿಕೆಯಲ್ಲಿ ಕೊರತೆ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಲಸಿಕೆ ಪೂರೈಕೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ರಾಜ್ಯಗಳಿಗೆ ಸಮರ್ಪಕವಾಗಿ ಲಸಿಕೆ ಹಂಚಿಕೆಯಾಗಲು ಜುಲೈ ವರೆಗೆ ಕಾಯಬೇಕಾಗದ ಪರಿಸ್ಥಿತಿ ಇದೆ. ದೇಶದ ಸುಮಾರು 94 ಕೋಟಿ ಮಂದಿಗೆ 188 ಕೋಟಿ ಡೋಸ್ಗಳನ್ನು ನೀಡಬೇಕಿದ್ದು, ವರ್ಷಾಂತ್ಯಕ್ಕೆ ಗುರಿ ತಲುಪುವ ಭರವಸೆಯನ್ನು ಸರ್ಕಾರ ನೀಡಿದೆ. ಇದುವರೆಗೆ ಕೇವಲ 18.6 ಕೋಟಿ ಡೋಸ್ಗಳನ್ನು ನೀಡಲಾಗಿದ್ದು, ಮುಂದಿನ ಏಳು ತಿಂಗಳಲ್ಲಿ 170 ಕೋಟಿ ಡೋಸ್ಗಳನ್ನು ನೀಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ. ಈ ಗುರಿ ಸಾಧಿಸಬೇಕಿದ್ದರೆ ದಿನಕ್ಕೆ 75 ಡೋಸ್ಗಳನ್ನು ನೀಡಬೇಕಿದೆ ಅಧಿಕೃತ ಅಂಕಿ ಅಂಶದಲ್ಲಿ ವಿವರಿಸಲಾಗಿದೆ.