ನಕಲಿ ಟೂಲ್ ಕಿಟ್ ವಿವಾದ: ಬಿಜೆಪಿ ವಿರುದ್ಧ 10,000ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲು ಆಗ್ರಹ

ಹೊಸದಿಲ್ಲಿ: ಕಾಂಗ್ರೆಸ್ ವಿರುದ್ಧ ಟೂಲ್ ಕಿಟ್ ಆರೋಪ ಹೊರಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಪಕ್ಷದ ವಕ್ತಾರ ಸಂಬಿತ್ ಪಾತ್ರ ಸಹಿತ ಹಲವು ಬಿಜೆಪಿ ನಾಯಕರ ವಿರುದ್ಧ ಪೊಲೀಸ್ ದೂರುಗಳು ದಾಖಲಾಗಿರುವ ಬೆಳವಣಿಗೆಯ ನಡುವೆಯೇ ಬಿಜೆಪಿ ವಿರುದ್ಧ ಕನಿಷ್ಠ ರೂ. 10,000 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಮಾಜಿ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಅವರು ಪಕ್ಷದ ನಾಯಕತ್ವವನ್ನು ಆಗ್ರಹಿಸಿದ್ದಾರೆ.
ಪಕ್ಷದಿಂದ ಈ ಹಿಂದೆ ವಜಾಗೊಂಡಿರುವ ಝಾ ಅವರು ಈ ಕುರಿತು ಟ್ವೀಟ್ ಮಾಡಿದ್ದಾರಲ್ಲದೆ ಮಾನನಷ್ಟ ಮೊಕದ್ದಮೆ ಹೊರತಾಗಿ ಬಿಜೆಪಿಯು ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳ ಮುಖಪಟದಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಸಾರ್ವಜನಿಕ ಕ್ಷಮಾಪಣೆ ಕೋರಬೇಕು ಎಂದು ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‍ಎಸ್‍ಯುಐ ಬುಧವಾರ ಛತ್ತೀಸಗಢದ ಮಾಜಿ ಸಿಎಂ ರಮಣ್ ಸಿಂಗ್ ಹಾಗೂ ಸಂಬಿತ್ ಪಾತ್ರ ಅವರ ವಿರುದ್ಧ ದೂರು ದಾಖಲಿಸಿದೆ. ಎಐಸಿಸಿ ಸಂಶೋಧನಾ ವಿಭಾಗದ ಲೆಟರ್ ಹೆಡ್ ಫೋರ್ಜರಿಗೊಳಿಸಿ ಪಕ್ಷಕ್ಕೆ ಅಪಖ್ಯಾತಿ ತರಲು ಸುಳ್ಳು ವಿಷಯವನ್ನು ಬಿಜೆಪಿ ಪ್ರಚುರ ಪಡಿಸಿದೆ ಎಂದು ಎನ್‍ಎಸ್‍ಯುಐ ತನ್ನ ದೂರಿನಲ್ಲಿ ಆರೋಪಿಸಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹಾಗೂ ಪಕ್ಷದ ಅಧ್ಯಕ್ಷ ನಡ್ಡಾ ವಿರುದ್ಧ ಇಂತಹುದೇ ದೂರನ್ನು ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ರಾಜೀವ್ ಗೌಡ ಹಾಗೂ ಐಟಿ ಸೆಲ್ ಮುಖ್ಯಸ್ಥ ರೋಹನ್ ಗುಪ್ತಾ ದಿಲ್ಲಿಯ ತುಘ್ಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.
ದೇಶ ಹಾಗೂ ಪ್ರಧಾನಿ ಮೋದಿಯ ವರ್ಚಸ್ಸನ್ನು ಕುಂದಿಸುವ ಉದ್ದೇಶದಿಂದ ರೂಪಾಂತರಿ ಕೊರೋನಾವನ್ನು ಇಂಡಿಯಾ ಸ್ಟ್ರೈನ್ ಅಥವಾ ಮೋದಿ ಸ್ಟ್ರೈನ್ ಎಂದು ಬಣ್ಣಿಸುವ ಉದ್ದೇಶದಿಂದ ಕಾಂಗ್ರೆಸ್ ಟೂಲ್ ಕಿಟ್ ಬಿಡುಗಡೆಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದೆ.