ಸೆಂಟ್ರಲ್ ವಿಸ್ಟಾ ಯೋಜನೆಯಡಿ ನೆಲಸಮವಾಗಲಿವೆ 12 ಮಹಾನ್ ಕಟ್ಟಡಗಳು
ಯೋಜನೆಯಡಿ ಧ್ವಂಸಗೊಳ್ಳಲಿರುವ ಕಟ್ಟಡಗಳ ಸಂಕ್ಷಿಪ್ತ ಮಾಹಿತಿ
ಫೋಟೊ ಕೃಪೆ: Twitter
ಹೊಸದಿಲ್ಲಿ, ಮೇ 20: ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೆ ಅಲೆ ಆರ್ಭಟಿಸುತ್ತಿರುವ ನಡುವೆಯೂ ನರೇಂದ್ರ ಮೋದಿ ಸರಕಾರವು ನೂತನ ಸಂಸತ್ಭವನ ನಿರ್ಮಾಣ ಸೇರಿದಂತೆ ಸೆಂಟ್ರಲ್ ವಿಸ್ಟಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಆದಾಗ್ಯೂ ಕೇಂದ್ರ ಸರಕಾರವು ಸೆಂಟ್ರಲ್ ವಿಸ್ಟಾ ಯೋಜನೆಯು ಭರದಿಂದ ನಡೆಯುತ್ತಿದೆ.
20 ಸಾವಿರ ಕೋಟಿ ರೂ. ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನೂತನ ಸಂಸತ್ ಭವನ, ಪ್ರಧಾನಿ ಹಾಗೂ ಉಪರಾಷ್ಟ್ರಪತಿಯವರ ನೂತನ ನಿವಾಸಗಳು ಮತ್ತು ಕೇಂದ್ರ ಸರಕಾರಿ ಕಚೇರಿಗಳಿಗಾಗಿ 10 ನೂತನ ಕಟ್ಟಡಗಳು ನಿರ್ಮಾಣಗೊಳ್ಳಲಿವೆ.
ಈ ಯೋಜನೆಯಡಿ ನೂತನ ಕಚೇರಿಗಳ ನಿರ್ಮಾಣಕ್ಕಾಗಿ ಸೆಂಟ್ರಲ್ವಿಸ್ಟಾ ಪ್ರದೇಶದಲ್ಲಿರುವ 4,58,820 ಚದರಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿರುವ ಹಲವಾರು ಐತಿಹಾಸಿಕ ಕಟ್ಟಡಗಳು ನೆಲಸಮಗೊಳ್ಳಲಿವೆ. ಈಗ ಇರುವ ಸಂಸತ್ ಭವನದ ಆವರಣದಲ್ಲಿಯೇ ನೂತನ ಸಂಸತ್ ಭವನ ನಿರ್ಮಾಣವಾಗಲಿದೆ.
ಈ ಮಧ್ಯೆ ಸೆಂಟ್ರಲ್ ಸೆಕ್ರೆಟರಿಯಾಟ್ ಪ್ರಾಜೆಕ್ಟ್ನ ಮೊದಲ ಮೂರು ಕಟ್ಟಡಗಳು 2023ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ ಇರುವ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ (ಐಎನ್ಜಿಸಿಎ) ಹಲವಾರು ಪಾರಂಪರಿಕ ಕಲಾಕೃತಿಗಳು, ಹಸ್ತಪ್ರತಿಗಳು ಹಾಗೂ ಬೃಹತ್ ಗ್ರಂಥಾಲಯವಿರುವ ಐತಿಹಾಸಿಕ ಕಟ್ಟಡವನ್ನು ಕೆಡವಿ ಇತರ ಈ ಕಟ್ಟಡಗಳು ಸ್ಥಾಪನೆಯಾಗಲಿವೆ.
ಮೋದಿ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಐಎನ್ಜಿಸಿಎ ಮಾತ್ರವಲ್ಲದೆ ಹಾಲಿ ರಾಷ್ಟ್ರೀಯ ಮ್ಯೂಸಿಯಂನ ಪಕ್ಕದಲ್ಲೇ ಇರುವ ಉಪರಾಷ್ಟ್ರಪತಿಯವರ ನಿವಾಸವನ್ನು ಕೆಡವಲಾಗುವುದು. ಪ್ರಧಾನಿಯವರ ನೂತನ ಕಚೇರಿ ಹಾಗೂ ನಿವಾಸವು ದಕ್ಷಿಣ ಬ್ಲಾಕ್ನಲ್ಲಿ ನಿರ್ಮಾಣವಾಗಲಿವೆ.
ಪ್ರಸಕ್ತ ವಿದೇಶಾಂಗ ಸಚಿವಾಲಯದ ಕಚೇರಿಗಳಿರುವ ಜವಾಹರಲಾಲ್ ನೆಹರೂ ಭವನವಿರುವ ಸ್ಥಳದಲ್ಲಿ ಏಳು ಅಂತಸ್ತುಗಳ ಕಟ್ಟಡ ನಿರ್ಮಾಣಗೊಳ್ಳಲಿದೆ.ಅಲ್ಲದೆ ಕೃಷಿ ಭವನ ಹಾಗೂ ಶಾಸ್ತ್ರಿ ಭವನ ಕಟ್ಟಡಗಳನ್ನು ಧ್ವಂಸಗೊಳಿಸಲಾಗುವುದು ಹಾಗೂ ಅವುಗಳಲ್ಲಿರುವ ಕಚೇರಿಗಳನ್ನು ನೂತನ ಕಾರ್ಯಾಲಯಕ್ಕೆ ವರ್ಗಾಯಿಸಲಾಗುವುದು. ಕೇಂದ್ರ ವಿಸ್ಟಾ ಪ್ರಾಜೆಕ್ಟ್ನ ಭಾಗವಾದ ನೂತನ ಕಾನ್ಫರೆನ್ಸ್ ಹಾಲ್ ಅನ್ನು ವಿಜ್ಞಾನ ಭವನದ ಸಮೀಪವೇ ನಿರ್ಮಿಸಲಾಗುವುದು.
ಕೇಂದ್ರ ವಿಸ್ಟಾ ಯೋಜನೆಯಡಿ ಧ್ವಂಸಗೊಳ್ಳಲಿರುವ ಕಟ್ಟಡಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ(ಐಜಿಎನ್ಸಿಎ):
ದಿವಂಗತ ಪ್ರಧಾನಿ ಹಾಗೂ ತನ್ನ ತಾಯಿ ಇಂದಿರಾಗಾಂಧಿ ಅವರ ಸ್ಮರಣಾರ್ಥವಾಗಿ 1985ರ ನವೆಂಬರ್ 19ರಂದು ಆಗಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಐಜಿಎನ್ಸಿಎ ಸ್ಥಾಪಿಸಿದ್ದರು. ಸಾಹಿತ್ಯ, ದೃಶ್ಯ ಕಲೆ, ವಾಸ್ತುಶಿಲ್ಪ, ಛಾಯಾಗ್ರಹಣ, ಸಂಗೀತ, ನೃತ್ಯ ಮತ್ತಿತರ ಕಲಾ ವಿಷಯಗಳ ಬಗ್ಗೆ ಅಧ್ಯಯನಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ರಾಷ್ಟ್ರೀಯ ಪತ್ರಾಗಾರ ಕಟ್ಟಡದ ಎದುರಿಗಿರುವ ಈ ಕೇಂದ್ರವು ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿದೆ.
ಶಾಸ್ತ್ರಿಭವನ:
ಮಾಜಿ ಪ್ರಧಾನಿ ಲಾಲ್ಬಹಾದೂರ್ ಶಾಸ್ತ್ರಿ ಸ್ಮರಣಾರ್ಥವಾಗಿ ಸ್ಥಾಪಿಸಲಾಗಿರುವ ಶಾಸ್ತ್ರಿಭವನದಲ್ಲಿ ಮಾನವಸಂಪನ್ಮೂಲಾಭಿವೃದ್ಧಿ, ಕೆಮಿಕಲ್ ಹಾಗೂ ಪೆಟ್ರೋಕೆಮಿಕಲ್ಸ್, ಕಾನೂನು ಮತ್ತು ನ್ಯಾಯ, ಮಾಹಿತಿ ಹಾಗೂ ಪ್ರಸಾರ, ಕಾರ್ಪೊರೇಟ್ ವ್ಯವಹಾರಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಮತ್ತಿತರ ಪ್ರಮುಖ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಕೃಷಿ ಭವನ:
ರಾಜಪಥ್ನ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿರುವ ಕೃಷಿ ಭವನದಲ್ಲಿ ಹಲವಾರು ಸಚಿವಾಲಯಗಳು ಕಾರ್ಯಾಚರಿಸುತ್ತವೆ. ಕೃಷಿ ಹಾಗೂ ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವಾಲಯಗಳು ಇಲ್ಲಿವೆ.
ವಿಜ್ಞಾನ ಭವನ:
ಸರಕಾರದ ಪ್ರಾಥಮಿಕ ಸಮಾವೇಶ ಕೇಂದ್ರವಾಗಿರುವ ವಿಜ್ಞಾನ ಭವನವನ್ನು 1956ರಲ್ಲಿ ನಿರ್ಮಿಸಲಾಗಿದೆ.1983ರಲ್ಲಿ ನಡೆದ ಕಾಮನ್ವೆಲ್ತ್ ವರಿಷ್ಠ ರ ಸರಕಾರಿ ಸಮಾವೇಶ (ಚೋಗಂ), 1983ರಲ್ಲಿ ನಡೆದ ಏಳನೇ ಆಲಿಪ್ತ ಚಳವಳಿ (ಎನ್ಎಎಂ) ಹಾಗೂ ಸಾರ್ಕ್ ಶೃಂಗಸಭೆ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಾವೇಶಗಳಿಗೆ ಈ ಕಟ್ಟಡವು ಆತಿಥ್ಯ ವಹಿಸಿದೆ.
ವಾರ್ಷಿಕ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಪ್ರದಾನ ಕಾರ್ಯಕ್ರಮ ಕೂಡಾ ವಿಜ್ಞಾನ ಭವನದಲ್ಲಿ ನಡೆಯುತ್ತದೆ. ಕೇಂದ್ರ ಲೋಕೋಪಯೋಗಿ ಇಲಾಖೆಯು ಈ ಕಟ್ಟಡವನ್ನು ನಿರ್ವಹಿಸುತ್ತಿದೆ.
ಉಪರಾಷ್ಟ್ರಪತಿಯವರ ನಿವಾಸ:
ಹಾಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕೃತ ನಿವಾಸ ಇದಾಗಿದ್ದು, ಮೌಲಾನಾ ಆಝಾದ್ ರಸ್ತೆಯಲ್ಲಿದೆ. ಎದುರು ಭಾಗದಲ್ಲಿ ವಿಶಾಲವಾದ ಹುಲ್ಲುಹಾಸು ಇರುವ ಈ ನಿವಾಸವು 6.48 ಎಕರೆ ವಿಸ್ತೀರ್ಣವಿದೆ.
ರಾಷ್ಟ್ರೀಯ ಮ್ಯೂಸಿಯಂ:
1949ರ ಆಗಸ್ಟ್ 15ರಂದು ರಾಷ್ಟ್ರೀಯ ಮ್ಯೂಸಿಯಂ ಅನ್ನು ಭಾರತದ ಪ್ರಪ್ರಥಮ ಗವರ್ನರ್ ಜನರಲ್ ಆರ್.ರಾಜಗೋಪಾಲಾಚಾರಿ ಉದ್ಘಾಟಿಸಿದ್ದರು. ಆನಂತರ ಅದನ್ನು ಜನಪಥ ರಸ್ತೆಯಲ್ಲಿರುವ ಹಾಲಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. 1955ರ ಮೇ ತಿಂಗಳಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಈ ಕಟ್ಟಡಕ್ಕೆ ಶಿಲಾನ್ಯಾಸಗೈದಿದ್ದರು. ಈ ಮ್ಯೂಸಿಯಂನಲ್ಲಿ ಪ್ರಸಕ್ತ ಭಾರತೀಯ ಹಾಗೂ ವಿದೇಶಿ ಸೇರಿದಂತೆ 2 ಲಕ್ಷಕ್ಕೂ ಅಧಿಕ ವೈವಿಧ್ಯಮಯ ವಸ್ತುಗಳಿವೆ. 5 ಸಾವಿರ ವರ್ಷಕ್ಕಿಂತಲೂ ಹಳೆಯದಾದ ಹಲವಾರು ಐತಿಹಾಸಿಕ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಹರಪ್ಪಾ ನಾಗರಿಕತೆಯ ಉತ್ಖನನದ ವೇಳೆ ಪತ್ತೆಯಾದ ‘ನರ್ತಿಸುವ ಯುವತಿ’ಯ ಪ್ರತಿಮೆ, ಬುದ್ಧನ ಅವಶೇಷಗಳು, ತಂಜಾವೂರ್ ಚಿತ್ರಕಲಾಕೃತಿಗಳು ಮತ್ತಿತರ ಅಮೂಲ್ಯ ಕೃತಿಗಳನ್ನು ಇಲ್ಲಿರಿಸಲಾಗಿದೆ.
ಜವವಾಹರಲಾಲ್ ನೆಹರೂ ಭವನ:
ಕೇವಲ ಹತ್ತು ವರ್ಷಗಳಷ್ಟು ಹಳೆಯದಾದ ಜವಾಹರಲಾಲ್ ನೆಹರೂ ಭವನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾರ್ಯಾಚರಿಸುತ್ತಿದೆ.220 ಕೋಟಿ ರೂ. ವೆಚ್ಚದಲ್ಲಿ ಹಾಗೂ 60 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡವು ‘ಹಸಿರು ಕಟ್ಟಡ ಪ್ರಮಾಣಪತ್ರ’ವನ್ನು ಪಡೆದಿರುವ ಪ್ರಪ್ರಥಮ ಸರಕಾರಿ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನಿರ್ಮಾಣಭವನ:
ಸೆಂಟ್ರಲ್ ಸೆಕ್ರೇಟರಿಯಟ್ನ ರಾಜಪಥ ಪ್ರದೇಶದಲ್ಲಿರುವ ನಿರ್ಮಾಣಭವನದಲ್ಲಿ ವಸತಿ ಹಾಗೂ ನಗರ ವ್ಯವಹಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯಾಚರಿಸುತ್ತಿದೆ.
ಉದ್ಯೋಗಭವನ:
ಉದ್ಯೋಗಭವನವು ಜನಪಥ ರಸ್ತೆಯ ಸಮೀಪದಲ್ಲಿದೆ. ಘನ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಸಚಿವಾಲಯ, ವಾಣಿಜ್ಯ ಹಾಗೂ ಕೈಗಾರಿಕೆ ಮತ್ತು ಎಂಎಸ್ಎಂ ಇ (ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು) ಸಚಿವಾಲಯವು ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತವೆ.
ರಕ್ಷಾ ಭವನ:
ಮಾನ್ಸಿಂಗ್ ಮಾರ್ಗದಲ್ಲಿರುವ ರಕ್ಷಾಭವನವು ರಾಷ್ಟ್ರೀಯ ರಕ್ಷಣಾ ವಿದ್ಯಾಲಯ (ಎನ್ಡಿಎ)ದ ಅಧಿಕೃತ ವಸತಿ ಸಂಕೀರ್ಣವಾಗಿದೆ.
ರಾಷ್ಟ್ರೀಯ ಪತ್ರಾಗಾರದ ಉಪ ಕಟ್ಟಡ:
ನೂತನ ಸೆಂಟ್ರಲ್ ವಿಸ್ಟ್ರಾ ಯೋಜನೆಯಲ್ಲಿ ರಾಷ್ಟ್ರೀಯ ಪತ್ರಾಗಾರದ ಮುಖ್ಯ ಕಟ್ಟಡಕ್ಕೆ ಧಕ್ಕೆಯುಂಟಾಗುವುದಿಲ್ಲವಾದರೂ, ಅದರ ಉಪಕಟ್ಟಡವು ನೆಲಸಮಗೊಳ್ಳಲಿದೆ ಹಾಗೂ ನೂತನ ಕಟ್ಟಡ ನಿರ್ಮಾಣವಾಗಲಿದೆ. ಪ್ರಸಕ್ತ ಮುಖ್ಯ ಕಟ್ಟಡ ಹಾಗೂ ಉಪಕಟ್ಟಡಗಳೆರಡಲೂ ಪತ್ರದಾಖಲೆಗಳನ್ನು ಶೇಖರಿಸಿಡಲಾಗಿದೆ. ಅತ್ಯಂತ ಅಮೂಲ್ಯವಾದ ಸಾರ್ವಜನಿಕ ದಾಖಲೆಗಳು, ಖಾಸಗಿ ಪತ್ರಗಳು, ಇಲಾಖಾ ದಾಖಲೆಗಳು, ರೇಖಾ ದಾಖಲೆಗಳು ಇಲ್ಲಿವೆ. 45 ಲಕ್ಷಕ್ಕೂ ಅಧಿಕ ಕಡತಗಳು, 25 ಸಾವಿರ ಅಪರೂಪದ ಹಸ್ತಪ್ರತಿಗಳು, 1 ಲಕ್ಷಕ್ಕೂ ಅಧಿಕ ನಕ್ಷೆಗಳು ಹಾಗೂ 1.3 ಲಕ್ಷ ಮೊಘಲ್ ಕಾಲದ ದಾಖಲೆಗಳಿವೆ.
ಲೋಕಕಲ್ಯಾಣ ಮಾರ್ಗ (7ನೇ ರೇಸ್ಕೋರ್ಸ್ ರಸ್ತೆ):
7 ರೇಸ್ ಕೋರ್ಸ್ ರಸ್ತೆಯೆಂದೇ ಜನಪ್ರಿಯವಾಗಿರುವ ಲೋಕಕಲ್ಯಾಣ ಮಾರ್ಗ್ ಪ್ರಧಾನಿಯವರ ಪ್ರಸಕ್ತ ನಿವಾಸವಿರುವ ಸ್ಥಳವಾಗಿದೆ. 1984ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅದನ್ನು ತನ್ನ ಅಧಿಕೃತ ನಿವಾಸವಾಗಿಸಿಕೊಂಡಿದ್ದರು. ಆದರೆ 16 ವರ್ಷಗಳ ಆನಂತರ, 1990ರಲ್ಲಿ ನಗರಾಭಿವೃದ್ಧಿ ಸಚಿವಾಲಯವು ಅದನ್ನು ಪ್ರಧಾನಿಯವರ ಖಾಯಂ ನಿವಾಸ ಹಾಗೂ ಕಾರ್ಯಾಲಯವೆಂಬುದಾಗಿ ಘೋಷಿಸಿತು.