ಮುಂಬೈ: ಸಮುದ್ರದಲ್ಲಿ ಮುಳುಗಿದ ಬಾರ್ಜ್ ನಲ್ಲಿದ್ದ 38 ಜನರಿಗಾಗಿ ತೀವ್ರ ಶೋಧ ಕಾರ್ಯಾಚರಣೆ

ಮುಂಬೈ,ಮೇ 20: ನಾಲ್ಕು ದಿನಗಳ ಹಿಂದೆ ತೌಕ್ತೆ ಚಂಡಮಾರುತದ ಅಬ್ಬರದಿಂದಾಗಿ ಮುಂಬೈ ತೀರದಾಚೆ 35 ಕಿ.ಮೀ.ದೂರದಲ್ಲಿ ಅರಬಿ ಸಮುದ್ರದಲ್ಲಿ ಮುಳುಗಿದ ಪಿ305 ಬಾರ್ಜ್ನಲ್ಲಿದ್ದ 38 ಜನರು ಇನ್ನೂ ಪತ್ತೆಯಾಗಿಲ್ಲ. ಭಾರತೀಯ ನೌಕಾಪಡೆಯ ಹಡಗುಗಳು ಬುಧವಾರ ರಾತ್ರಿಯಿಡೀ ಸರ್ಚ್ಲೈಟ್ಗಳನ್ನು ಬಳಸಿ ಶೋಧ ಕಾರ್ಯ ನಡೆಸಿದವಾದರೂ ಬದುಕುಳಿದಿರಬಹುದಾದ ಇನ್ನಷ್ಟು ಜನರನ್ನು ಪತ್ತೆ ಹಚ್ಚುವ ಆಶೆ ಗುರುವಾರ ಕ್ಷೀಣಿಸಿದೆ.
ನೌಕಾಪಡೆಯು ನಾಲ್ಕನೆಯ ದಿನವಾದ ಗುರುವಾರ ಹೊಸದಾಗಿ ವೈಮಾನಿಕ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಸೋಮವಾರ ಚಂಡಮಾರುತದಿಂದಾಗಿ ಬಾರ್ಜ್ ನಿಯಂತ್ರಣ ಕಳೆದುಕೊಂಡಿದ್ದ ಮುಂಬೈ ಕರಾವಳಿಯಾಚೆ ಸಮುದ್ರದಲ್ಲಿ ಹೆಲಿಕಾಪ್ಟರ್ಗಳು ಶೋಧ ಕಾರ್ಯ ನಡೆಸುತ್ತಿವೆ.
ಪ್ರತಿಕೂಲ ವಾತಾವರಣದ ವಿರುದ್ಧ ಹೋರಾಡಿ ಬಾರ್ಜ್ನಲ್ಲಿದ್ದ 261 ಜನರ ಪೈಕಿ 186 ಜನರನ್ನು ಮತ್ತು ವರಪ್ರದಾ ಟಗ್ಬೋಟ್ ನಲ್ಲಿದ್ದ ಇಬ್ಬರು ಸಿಬ್ಬಂದಿಗಳನ್ನು ನೌಕಾಪಡೆಯು ರಕ್ಷಿಸಿದ್ದು, ಬಾರ್ಜ್ನಲ್ಲಿದ್ದ 37 ಸಿಬ್ಬಂದಿಗಳು ಮೃತಪಟ್ಟಿದ್ದಾರೆ. 38 ಜನರು ನಾಪತ್ತೆಯಾಗಿದ್ದಾರೆ.
ಮೃತರ ಶವಗಳನ್ನು ಬುಧವಾರ ಮುಂಬೈ ಬಂದರಿಗೆ ತರಲಾಗಿದ್ದು, ಇನ್ನಷ್ಟು ಜನರನ್ನು ಪತ್ತೆಹಚ್ಚುವ ಅವಕಾಶ ಕ್ಷೀಣವಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದರು.
ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದರೂ ಈ ನತದೃಷ್ಟ ಬಾರ್ಜ್ ತೀರಕ್ಕೆ ಮರಳದೆ ಪ್ರಕ್ಷುಬ್ಧ ಸಮುದ್ರದಲ್ಲಿ ಏಕಿತ್ತು ಎಂಬ ಕುರಿತು ಸಿಬ್ಬಂದಿಗಳ ಸಾವುಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ.
ತೀರದಿಂದ ಸುಮಾರು 70 ಕಿ.ಮೀ.ದೂರದಲ್ಲಿರುವ ಒಎನ್ಜಿಸಿಯ ತೈಲ ಕ್ಷೇತ್ರಗಳಿರುವ ಬಾಂಬೆ ಹೈ ಪ್ರದೇಶದಲ್ಲಿಯ ಹೀರಾ ಪ್ಲಾಟ್ಫಾರ್ಮ್ ಬಳಿ ಲಂಗರು ಹಾಕಿದ್ದ ಬಾರ್ಜ್ ಸೋಮವಾರ ಭಾರೀ ಮಳೆಗಾಳಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದಿಕ್ಕು ತಪ್ಪಿ ಓಲಾಡುತ್ತ ಸಾಗಿ ಬಳಿಕ ಸಮುದ್ರದಲ್ಲಿ ಮುಳುಗಿತ್ತು. ಆಗಿನಿಂದಲೂ ನೌಕಾಪಡೆಯ ಹಡಗುಗಳು ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ.