ನ್ಯಾಯಾಂಗದ ಕುರಿತು ಡಿವಿಎಸ್, ಸಿ.ಟಿ. ರವಿ ಹೇಳಿಕೆ: ಪ್ರತಿಕ್ರಿಯೆ ನೀಡಲು ಸಮಯವಿಲ್ಲ ಎಂದ ಹೈಕೋರ್ಟ್

ಬೆಂಗಳೂರು, ಮೇ 20: ನ್ಯಾಯಾಂಗದ ಬಗ್ಗೆ ಹೇಳಿಕೆಗಳನ್ನು ನೀಡಿದ ಬಿಜೆಪಿ ಮುಖಂಡ ಸಿಟಿ ರವಿ ಹಾಗೂ ಕೇಂದ್ರ ಮಂತ್ರಿ ಡಿ.ವಿ. ಸದಾನಂದಗೌಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಪ್ರತಿಕ್ರಿಯಿಸಲು ಸಮಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಾಧೀಶರು ಸರ್ವಜ್ಞರಲ್ಲ ಎಂದಿದ್ದ ಸಿ.ಟಿ. ರವಿ ಹಾಗೂ ಲಸಿಕೆ ಉತ್ಪಾದನೆ ಆಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ ಎಂದಿದ್ದ ಕೇಂದ್ರ ಮಂತ್ರಿ ಡಿ.ವಿ.ಸದಾನಂದಗೌಡರ ಹೇಳಿಕೆಗಳ ಕುರಿತು ನ್ಯಾಯವಾದಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ವಕೀಲ ಜಿ.ಆರ್ ಮೋಹನ್ ಸೇರಿದಂತೆ ಕೆಲ ವಕೀಲರು ನ್ಯಾಯಾಂಗವನ್ನು ಟೀಕಿಸಿದ ಇಬ್ಬರೂ ಜನಪ್ರತಿನಿಧಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸುವಂತೆ ಕೋರಿ ಇ-ಮೇಲ್ ಮೂಲಕ ಮನವಿ ಮಾಡಿದ್ದರು. ಈ ಕುರಿತು ವಿಚಾರಣೆ ವೇಳೆ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರು, ರಾಜಕಾರಣಿಗಳ ಟೀಕೆ ಬಗ್ಗೆ ಕ್ರಮಕ್ಕೆ ಕೆಲವರು ಇ-ಮೇಲ್ ಕಳುಹಿಸಿದ್ದಾರೆ. ನಮಗೆ ಈ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸಮಯವಿಲ್ಲ ಎಂದರು.
ಅಲ್ಲದೇ, ನಾವು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇವೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟು ವಿವಾದಕ್ಕೆ ಕೊನೆ ಎಳೆದರು.







