ನಿವೃತ್ತ ಧರ್ಮಗುರು ವಿನ್ಸೆಂಟ್ ವಿಕ್ಟರ್ ಮಿನೇಜಸ್ ನಿಧನ

ಮಂಗಳೂರು, ಮೇ 20: ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಗುರು ಹಾಗೂ ರಾಕ್ಣೊ ವಾರಪತ್ರಿಕೆಯ ಮಾಜಿ ಸಂಪಾದಕ ವಂ. ವಿನ್ಸೆಂಟ್ ವಿಕ್ಟರ್ ಮಿನೇಜಸ್ (75) ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.
1945ರಲ್ಲಿ ವೆಲೆನ್ಸಿದಲ್ಲಿ ಜನಿಸಿದ ಅವರು 1974ರಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಗುರುವಾಗಿ ದೀಕ್ಷೆ ಪಡೆದರು. ಬಳಿಕ ಕಿರೆಂ ಮತ್ತು ಬಿಜಯ್ ನಲ್ಲೂ ಹಾಗೂ ನಾರಂಪಾಡಿ, ಪೆರ್ನಾಲ್, ಮಿಯಾರ್, ಕಾಸ್ಸಿಯಾ, ದೇರೆಬೈಲ್, ಪಾಲ್ದಾನೆ ಚರ್ಚುಗಳಲ್ಲಿ ಸಹಾಯಕ ಧರ್ಮ ಗುರುವಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಅವರು ಜೆಪ್ಪುವಿನ ವಿಶ್ರಾಂತ ಧರ್ಮಗುರುಗಳ ನಿವಾಸದಲ್ಲಿ ವಾಸಿಸುತ್ತಿದ್ದರು.
ಕೊಂಕಣಿ ಪತ್ರಿಕೆ ರಾಕ್ಣೊ ಇದರ ಸಂಪಾದಕರಾಗಿ (1985-93) ಹಲವಾರು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿದ್ದ ಅವರು ‘ವಾಕಿಂಗ್ ಬೈಬಲ್’ ಎಂಬ ಹೆಸರನ್ನು ಪಡೆದಿದ್ದರು. ಬೈಬಲ್ ಬಗ್ಗೆ ಹಲವು ಅಧ್ಯಯನ ಪುಸ್ತಕಗಳನ್ನು ರಚಿಸಿದ್ದಾರೆ.
ವಿನ್ಸೆಂಟ್ ವಿಕ್ಟರ್ ಮಿನೇಜಸ್ ಅವರ ನಿಧನಕ್ಕೆ ಮಂಗಳೂರು ಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಮಂಗಳೂರು ಧರ್ಮಪ್ರಾಂತದ ಕ್ರೈಸ್ತರು ಸಂತಾಪ ಸೂಚಿಸಿದ್ದಾರೆ





