ಸಿನೆಮೋತ್ಸವಕ್ಕೆ ಮೀಸಲಿಟ್ಟ ಹಣ ಸಿನೆಮಾ ಕಾರ್ಮಿಕರಿಗೆ ನೀಡಿ: ನಿರ್ದೇಶಕ ಮಂಸೋರೆ
ಬೆಂಗಳೂರು, ಮೇ 20: ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನಡೆಯುವ 2021ನೇ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕೆ ಮೀಸಲಿಟ್ಟಿರುವ ಹಣವನ್ನು ಕನ್ನಡ ಸಿನೆಮಾ ರಂಗದ ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ನೀಡಬೇಕೆಂದು ಸಿನೆಮಾ ನಿರ್ದೇಶಕ ಮಂಸೋರೆ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಸಿನೆಮಾ ರಂಗದ ಕಾರ್ಮಿಕರ ನೆರವಿಗೆ ಸರಕಾರನ್ನು ಕಾಯುತ್ತಾ ಕೂರುವುದಕ್ಕಿಂತ 2021ನೇ ಸಾಲಿನ ಸಿನೆಮೋತ್ಸವಕ್ಕೆ ಬಿಡುಗಡೆಯಾಗಿರುವ ಹಣವನ್ನು ಕೋವಿಡ್‍ನಿಂದ ಸಂಕಷ್ಟ ಅನುಭವಿಸುತ್ತಿರುವ ಕಾರ್ಮಿಕರಿಗೆ ನೀಡಿ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಿಗೆ ಒತ್ತಾಯಿಸಿದ್ದಾರೆ.
ನಿರ್ದೇಶಕ ಮಂಸೋರೆ ಸಲಹೆಗೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೋವಿಡ್ ಸಮಯದಲ್ಲಿ ಕಾರ್ಮಿಕರನ್ನು ಜೀವವನ್ನು ಉಳಿಸುವುದರ ಕಡೆಗೆ ಆದ್ಯತೆ ತೋರಬೇಕಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.





