ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಅವಧಿ 2 ತಿಂಗಳು ವಿಸ್ತರಣೆ

ಹೊಸದಿಲ್ಲಿ, ಮೇ 20: 2020-21ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಯ ಅವಧಿಯನ್ನು ಕೇಂದ್ರ ಸರಕಾರವು ಎರಡು ತಿಂಗಳು ಅಂದರೆ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ.
ಕಂಪೆನಿಗಳಿಗಾಗಿನ ಐಟಿಆರ್ ಸಲ್ಲಿಕೆಯ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಗುರುವಾರ ತಿಳಿಸಿದೆ.
ಆದಾಯತೆರಿಗೆ ಕಾನೂನಿಗೆ ಅನುಗುಣವಾಗಿ ಲೆಕ್ಕಪರಿಶೋಧನೆಯ ಅಗತ್ಯವಿಲ್ಲ ಹಾಗೂ ಐಟಿಆರ್-1 ಅಥವಾ ಐಟಿಆರ್-4 ಫಾರ್ಮ್ಗಳನ್ನು ಬಳಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳಿಗೆ ಜುಲೈ 31 ಅಂತಿಮಗಡುವಾಗಿತ್ತು. ಅದನ್ನೀಗ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ತೆರಿಗೆಪಾವತಿದಾರರ ಕಂಪೆನಿಗಳ ಅಥವಾ ಸಂಸ್ಥೆಗಳ ಐಟಿ ರಿಟರ್ನ್ಸ್ ಸಲ್ಲಿಕೆಯ ಅಂತಿಮ ಗಡುವು ಅಕ್ಟೋಬರ್ 31 ಆಗಿದ್ದು, ಅದನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ‘ತೀವ್ರವಾದ ಸಾಂಕ್ರಾಮಿಕ ರೋಗದ ಹಾವಳಿಯ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರಿಗೆ ಉಪಶಮನವಾಗಿ ಐಟಿ ರಿಟರ್ನ್ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ’ಯೆಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.