'ಮೋದಿಯವರೆ ನಮ್ಮನ್ನು ಬಂಧಿಸಿ': ಮೈಸೂರು ಯುವ ಕಾಂಗ್ರೆಸ್ ವತಿಯಿಂದ ಅಭಿಯಾನ

ಮೈಸೂರು, ಮೇ 20: ಮೋದಿಯವರೇ ನಮ್ಮನ್ನು ಬಂಧಿಸಿ ಎನ್ನುವ ಮೂಲಕ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಭಿಯಾನ ಆರಂಭಿಸಿದೆ.
ನಗರದ ಕಾಂಗ್ರೆಸ್ ಭವನದ ಎದುರು ಗುರುವಾರ ಅಭಿಯಾನ ನಡೆಸಿ ಮಾತನಾಡಿದ ಕಾರ್ಯಕರ್ತರು, ಪ್ರಧಾನಿಯ ವಿಫಲತೆಯನ್ನು ಪ್ರಶ್ನಿಸಿ 'ಮೋದಿಯವರೆ ನಮ್ಮ ವ್ಯಾಕ್ಸಿನ್ ಏಕೆ ವಿದೇಶಕ್ಕೆ ಕಳುಹಿಸಿದಿರಿ' ಎಂಬ ಆಗ್ರಹದ ಪ್ರಶ್ನೆಯ ಪೋಸ್ಟರ್ ಅಂಟಿಸಿದ 15 ಜನರನ್ನು ಹೇಡಿ ಸರ್ಕಾರ ಬಂಧಿಸಿದೆ. ದೇಶದ ಜನರೆಲ್ಲಾ ಇದೇ ಪ್ರಶ್ನೆ ಕೇಳುತ್ತೇವೆ. ಎಲ್ಲರನ್ನೂ ಬಂಧಿಸುವ ತಾಕತ್ತಿದೆಯಾ ? ಹಾಗಾದರೆ ಮೊದಲು ನಮ್ಮನ್ನು ಬಂಧಿಸಿ ಎಂದರಲ್ಲದೆ, ಈ ಅಭಿಯಾನವನ್ನು ಈ ನಿರ್ಲಕ್ಷಿತ ಸರ್ಕಾರದ ವಿರುದ್ಧ ದೇಶ ಹಾಗೂ ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ ಎಂದರು.
ಭಾರತ ಸರ್ಕಾರ ತನ್ನ ದೇಶದ ಜನರ ಜೀವಗಳನ್ನು ಪಣಕ್ಕಿಟ್ಟು ವಿದೇಶಿ ಜನರ ರಕ್ಷಣೆಗಾಗಿ ಹೊರಟಿರುವುದು ಅತ್ಯಂತ ಖಂಡನೀಯ. ಬಹುಶಃ ಪ್ರಧಾನಿ ಮೋದಿ ವಿದೇಶಗಳಲ್ಲಿಯೇ ಹೆಚ್ಚು ತಿರುಗಾಡುತ್ತಿದ್ದರ ಪರಿಣಾಮವಿದು. ವಿದೇಶಕ್ಕೆ ಲಸಿಕೆ ನೀಡುತ್ತಿರುವುದಕ್ಕೆ ಮೋದಿ ಮತ್ತು ಅವರ ಭಕ್ತರು ಹೇಳುವ ರೀತಿಯಂತೂ ಅಸಹ್ಯವಾಗಿದೆ. ಇದೇ ಸರ್ಕಾರ ಅಲ್ಲವೇ ಜನರಿಗೆ ನೀವು ಜಾಗಟೆ ಬಾರಿಸಲು, ಶಂಖ ಊದಲು ಹೇಳಿದ್ದು. ನೀವು ಲಸಿಕೆ ಹಾಕಿಸಿಕೊಳ್ಳ ಬೇಕು ಎಂದರೆ ಹಾಕಿಸಿಕೊಳ್ಳದೇ ಜನರು ಇರುತ್ತಿದ್ದರೇ ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರಗಳು ಲಸಿಕೆ ಹಾಕಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಪ್ರಧಾನ ಮಂತ್ರಿ ಗಳೇ ಇಂತಹ ಕ್ಷುಲ್ಲಕ ಕಾರಣಗಳ ಬಿಡಿ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಆಡಬೇಡಿ. ನಮ್ಮ ದೇಶದಕ್ಕೆ ಸಾಕಾಗುವಷ್ಟು ಇಟ್ಟು ಕೊಂಡು ವಿದೇಶಕ್ಕೆ ಕಳುಹಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಮನೆಗೆ ಮಾರಿಯಂತೆ ಸರ್ಕಾರ ವರ್ತಿಸುತ್ತಿದೆ. ಈಗಾಗಲೇ ದೇಶವ್ಯಾಪಿ ಲಕ್ಷಾಂತರ ಜನ ಸಾಯುತ್ತಿದ್ದಾರೆ ಎಂದರು.
ಲಸಿಕೆ ಇದ್ದಿದ್ದರೆ ಇವರೆಲ್ಲ ಬದುಕುತ್ತಿದ್ದರಲ್ಲವೇ? ಇನ್ನಾದರೂ ನಿಮ್ಮ ವಿದೇಶಿ ವ್ಯಾಮೋಹ ಇಲ್ಲಿಗೆ ನಿಲ್ಲಲಿ. ದೇಶದ ಜನರಿಗೆ ಲಸಿಕೆ ನೀಡಿ. ಇನ್ನೂ ಮೂರನೇ ಅಲೆಯ ಭಯ ಬೇರೆ ಇದೆ. ಜನರ ಜೀವದ ಜೊತೆಗೆ ಚೆಲ್ಲಾಟ ಬೇಡ. ಲಸಿಕೆ ವಿದೇಶಗಳಿಗೆ ಕಳಿಸಬೇಡಿ. ಮೊದಲು ದೇಶದ ಜನಕ್ಕೆ ಲಸಿಕೆ ಕೊಡಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ, ಮೈಸೂರು ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಯ್ಯದ್ ಅಬ್ರರ್, ಸಾಹುಕಾರ್ ಚೆನ್ನೈಯ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯೋಗೇಶ, ದೇವರಾಜ್ ಅರಸು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಕೆಂಪಿ ಅಭಿಯಾನದಲ್ಲಿ ಭಾಗವಹಿಸಿದ್ದರು.







