ಆಕ್ಷೇಪಕಾರಿ ಟ್ವೀಟ್ ಆರೋಪ: ಶರ್ಜೀಲ್ ಉಸ್ಮಾನಿ ವಿರುದ್ಧ ಎಫ್ಐಆರ್

Photo: Twitter
ಅಲಿಗಢ, ಮೇ 20: ಆಕ್ಷೇಪಕಾರಿ ಟ್ವೀಟ್ಗಳನ್ನು ಪ್ರಕಟಿಸಿರುವ ಆರೋಪದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಶಾರ್ಜಿಲ್ ಉಸ್ಮಾನಿ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಉಸ್ಮಾನಿ ಅವರು ಇತ್ತೀಚೆಗೆ ಟ್ವಿಟರ್ನಲ್ಲಿ ಪ್ರಕಟಿಸಿರುವ ಪೋಸ್ಟ್ಗಳಲ್ಲಿ ಶ್ರೀರಾಮಚಂದ್ರನ ಬಗ್ಗೆ ಅಗೌರವಯುತವಾದ ಪದಗಳನ್ನು ಬಳಸಿದ್ದಾರೆಂದು ಆರೋಪಿಸಿ ಜಲ್ನಾದ ಹಿಂದೂ ಜಾಗರಣ ಮಂಚ್ನ ಕಾರ್ಯಕರ್ತ ಅಂಬಾದಾಸ್ ಅಂಭೋರೆ ದೂರು ನೀಡಿದ್ದರೆಂದು ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಉಸ್ಮಾನಿ ವಿರುದ್ಧ ಬುಧವಾರ ರಾತ್ರಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದುರುದ್ದೇಶದ ಕೃತ್ಯ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಜಲ್ನಾದ ಸೈಬರ್ ಅಪರಾಧ ಇಲಾಖೆಗೆ ವರ್ಗಾಯಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಜನವರಿ 30ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರ ಪೊಲೀಸರು ಉಸ್ಮಾನಿ ವಿರುದ್ಧ ಭಾರತೀಯ ಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಧ್ವೇಷವನ್ನು ಉತ್ತೇಜಿಸುವುದು)ಅನ್ವಯ ಪ್ರಕರಣ ದಾಖಲಿಸಿದ್ದರು.