ಚಿಪ್ಕೊ ಚಳವಳಿಯ ನಾಯಕ, ಪರಿಸರವಾದಿ ಸುಂದರ್ ಲಾಲ್ ಬಹುಗುಣ ಕೋವಿಡ್ ನಿಂದ ನಿಧನ

photo: twitter
ಹೊಸದಿಲ್ಲಿ, ಮೇ 21: ಅರಣ್ಯ ನಾಶಗೊಳಿಸುವುದನ್ನು ವಿರೋಧಿಸಿ 1970ರಲ್ಲಿ ಚಿಪ್ಕೊ (ಅಪ್ಪಿಕೋ) ಚಳವಳಿ ಹಮ್ಮಿಕೊಂಡಿದ್ದ ಖ್ಯಾತ ಪರಿಸರವಾದಿ ಸುಂದರ್ಲಾಲ್ ಬಹುಗುಣ(94 ವರ್ಷ) ಉತ್ತರಾಖಂಡದಲ್ಲಿ ಶುಕ್ರವಾರ ಮಧ್ಯಾಹ್ನ ನಿಧನರಾದರು ಎಂದು ವರದಿಯಾಗಿದೆ. ಕೊರೋನ ಸೋಂಕಿಗೆ ಒಳಗಾಗಿದ್ದ ಅವರನ್ನು ಮೇ 8ರಂದು ರಿಶಿಕೇಶದಲ್ಲಿರುವ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ(ಎಐಐಎಂಎಸ್)ಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಅವರ ಆರೋಗ್ಯ ಬಿಗಡಾಯಿಸಿ ಆಮ್ಲಜನಕದ ಪ್ರಮಾಣ ಕುಸಿಯಿತು. ಚಿಕಿತ್ಸೆ ಫಲಿಸದೆ ಶುಕ್ರವಾರ ಮಧ್ಯಾಹ್ನ 12:05ಕ್ಕೆ ಕೊನೆಯುಸಿರೆಳೆದರು ಎಂದು ರಿಶಿಕೇಶ್ ಎಐಎಂಎಸ್ನ ನಿರ್ದೇಶಕ ರವಿಕಾಂತ್ ಹೇಳಿದ್ದಾರೆ.
ಅಪ್ಪಿಕೋ ಚಳವಳಿಯ ಜೊತೆಗೇ, ಉತ್ತರಾಖಂಡದಲ್ಲಿ ಭಾಗೀರಥಿ ನದಿಗೆ ತೆಹ್ರಿ ಅಣೆಕಟ್ಟು ನಿರ್ಮಿಸುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ದೇಶದ ಪ್ರಮುಖ ಪರಿಸರವಾದಿ ಎಂದು ಗುರುತಿಸಿಕೊಂಡಿದ್ದ ಬಹುಗುಣ, ಪರಿಸರದೊಂದಿಗೆ ಸೌಹಾರ್ದಯುತವಾಗಿ ಬದುಕುವ ನಮ್ಮ ಶತಮಾನಗಳಷ್ಟು ಪುರಾತನ ವಿಶ್ವಾಸ, ಸಿದ್ಧಾಂತದ ಪ್ರತಿಪಾದಕರಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೂ ಬಹುಗುಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
► ಚಿಪ್ಕೊ(ಅಪ್ಪಿಕೋ) ಚಳವಳಿ
ಗಾಂಧೀಜಿಯವರ ಚಿಂತನೆಗಳಲ್ಲಿ ವಿಶ್ವಾಸವಿರಿಸಿದ್ದ ಬಹುಗುಣ, ಚಿಪ್ಕೊ ಚಳವಳಿಯನ್ನು ದೇಶದ ಅರಣ್ಯ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಮೈಲುಗಲ್ಲಾಗಿ ರೂಪಿಸಿದ್ದರು. 1970ರಲ್ಲಿ ಅರಣ್ಯಗಳಲ್ಲಿರುವ ಮರಗಳನ್ನು ನಿರಂತರ ಕಡಿಯುತ್ತಿರವುದು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಉತ್ತರಾಖಂಡದ ಚಮೋಲಿ ಗ್ರಾಮದ ಜನತೆ ವಿರೋಧಿಸಿದ್ದರು. ಇದಕ್ಕೆ ಕಿವಿಗೊಡದ ಸರಕಾರ 1974ರ ಜನವರಿಯಲ್ಲಿ ಅಲಕಾನಂದ ನದಿ ತೀರದ 2,500 ಮರಗಳನ್ನು ಹರಾಜು ಹಾಕುವುದಾಗಿ ಘೋಷಿಸಿತು.
ಹರಾಜು ಪ್ರಕ್ರಿಯೆ ಮುಗಿದು ಮರಕಡಿಯುವ ತಂಡ ಆಗಮಿಸಿದಾಗ ಭಾರೀ ಸಂಖ್ಯೆಯಲ್ಲಿ ಒಟ್ಟುಸೇರಿದ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ನಿಂತು ಪ್ರತಿಭಟಿಸಿದರು. ಗೌರಾ ದೇವಿ, ಸುದೇಶಾ ದೇವಿ ಮತ್ತು ಬಚ್ನಿದೇವಿ ಎಂಬ ಮೂವರು ಮಹಿಳೆಯರು ಈ ವಿಶಿಷ್ಟ ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು. ಈ ಚಳವಳಿಗೆ ಬಹುಗುಣ ನಿರ್ದೇಶನ ನೀಡಿದ್ದರು. ಮರಕಡಿಯದಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಬಹುಗುಣ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ಆಗಿನ ಪ್ರಧಾನಿ ಇಂದಿರಾಗಾಂಧಿ, ಮರ ಕಡಿಯುವುದರ ಮೇಲೆ 15 ವರ್ಷ ನಿಷೇಧ ವಿಧಿಸಿದ್ದರು.







