ಭವಾನಿಪುರ ಕ್ಷೇತ್ರದಿಂದ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧೆ ಸಾಧ್ಯತೆ
ಶಾಸಕ ಸ್ಥಾನಕ್ಕೆ ಶೋಭನ್ ದೇಬ್ ಚಟ್ಟೋಪಾಧ್ಯಾಯ ರಾಜೀನಾಮೆ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮರು ಚುನಾವಣೆಗೆ ದಾರಿ ಮಾಡಿಕೊಡಲು ಭವಾನಿಪುರದ ತೃಣಮೂಲ ಕಾಂಗ್ರೆಸ್ ಶಾಸಕ ಶೋಭನ್ ದೇಬ್ ಚಟ್ಟೋಪಾಧ್ಯಾಯ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ವಿಧಾನಸಭೆಯ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯರನ್ನು ಭೇಟಿಯಾದ ಚಟ್ಟೋಪಾಧ್ಯಾಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಚಟ್ಟೋಪಾಧ್ಯಾಯ ಕೃಷಿ ಸಚಿವರಾಗಿ ಮುಂದಿನ 6 ತಿಂಗಳ ಕಾಲ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಬೇಕಾಗಿದೆ.
ಮುಂಬರುವ ಆರು ತಿಂಗಳಲ್ಲಿ ಮಮತಾ ಬ್ಯಾನರ್ಜಿ ಭವಾನಿಪುರದಿಂದ ಹೋರಾಡಲಿದ್ದಾರೆ ಎಂದು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯರಿಗೆ ಹಸ್ತಾಂತರಿಸುವ ಮೊದಲು ಚಟ್ಟೋಪಾಧ್ಯಾಯ NDTVಗೆ ತಿಳಿಸಿದರು.
ಮಮತಾ ಬ್ಯಾನರ್ಜಿ ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಅಸೆಂಬ್ಲಿ ಸ್ಥಾನದಿಂದ ತಮ್ಮ ಮಾಜಿ ಆಪ್ತ ಸುವೆಂದು ಅಧಿಕಾರಿ ವಿರುದ್ಧ ಕಡಿಮೆ ಅಂತರದ ಮತದಿಂದ ಸೋತಿದ್ದರು. ವಿಧಾನಸಭೆಯ 292 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದಿರುವ ಟಿಎಂಸಿ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಿದರೂ, ಮಮತಾ ಬ್ಯಾನರ್ಜಿ ಕೇವಲ 1,956 ಮತಗಳ ಅಂತರದಿಂದ ಸೋತರು.
ಸೋತ ಹೊರತಾಗಿಯೂ, ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು ಹಾಗೂ ಮೇ 5 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಅಂತಹ ಸಂದರ್ಭಗಳಲ್ಲಿ ಸಾಂವಿಧಾನಿಕ ನಿಬಂಧನೆಯ ಪ್ರಕಾರ, ಟಿಎಂಸಿ ಮುಖ್ಯಸ್ಥರು ವಿಧಾನಸಭೆಗೆ ಮತ್ತೆ ಚುನಾಯಿತರಾಗಲು ಆರು ತಿಂಗಳುಗಳಿವೆ. ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸದೇ ಇದ್ದರೆ ಅವರು ತಮ್ಮ ಸಿಎಂ ಹುದ್ದೆಯನ್ನು ಕಳೆದುಕೊಳ್ಳುವ ಅಪಾಯವಿದೆ.
ಟಿಎಂಸಿಯ ಹಿರಿಯ ನಾಯಕ ಚಟ್ಟೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿಯ ಸಾಂಪ್ರದಾಯಿಕ ಕ್ಷೇತ್ರ ಭವಾನಿಪುರದಿಂದ ಸ್ಪರ್ಧಿಸಿದ್ದರು. 57.71 ರಷ್ಟು ಮತಗಳನ್ನು ಗಳಿಸುವ ಮೂಲಕ ಚಟ್ಟೋಪಾಧ್ಯಾಯ ಗೆಲುವು ಸಾಧಿಸಿದ್ದರು.







