ಕೊರೋನ ಸಂಕಷ್ಟ: ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ನೀಡಲು ಮಾನವ ಹಕ್ಕುಗಳ ಕಮಿಟಿ ಆಗ್ರಹ
ಶಿವಮೊಗ್ಗ, ಮೇ 21: ಕೊರೋನದ ಸಂಕಷ್ಟದ ಸಮಯದಲ್ಲಿ ಮೂಲೆ ಮೂಲೆಗಳ ಸುದ್ದಿಗಳನ್ನು ಹುಡುಕುತ್ತಾ, ಜನಜಾಗೃತಿ ಮೂಡಿಸುತ್ತಿರುವ ಪತ್ರಕರ್ತರು ಹಾಗೂ ಜಿಲ್ಲಾ ಮಟ್ಟದ ಪತ್ರಿಕಾ ಸಂಪಾದಕರಿಗೆ ಕೂಡಲೇ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಸೂಕ್ತ ಪರಿಹಾರ ನೀಡಬೇಕು ಎಂದು ಮಾನವ ಹಕ್ಕುಗಳ ಕಮಿಟಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಭೈರಗೌಡ ಹಾಗೂ ರಾಜ್ಯಾಧ್ಯಕ್ಷ ಕೆ.ನಾಗರಾಜ್ ಒತ್ತಾಯಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಕಮಿಟಿಯು, ಇತ್ತೀಚೆಗಷ್ಟೆ ಮುಖ್ಯಮಂತ್ರಿ ಕೊರೋನ ಅವಧಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಅದರಲ್ಲಿ ಪತ್ರಕರ್ತರನ್ನು ಹಾಗೂ ಸಂಪಾದಕರನ್ನು ಕೈ ಬಿಟ್ಟಿರುವುದು ದುರಂತದ ಸಂಗತಿಯಾಗಿದೆ ಎಂದಿದ್ದಾರೆ.
ಕೊರೋನದ ಈ ಸಂದರ್ಭದಲ್ಲಿ ವಿಶೇಷವಾಗಿ ಜಿಲ್ಲಾ ಮಟ್ಟದ ಪತ್ರಿಕೆಗಳು ಯಾವುದೇ ಜಾಹೀರಾತು ಇಲ್ಲದೇ, ಮುದ್ರಣದ ದುಬಾರಿ ದರ ನೀಡುತ್ತಾ ಕರ್ತವ್ಯ ನಿರ್ವಹಿಸುತ್ತಿವೆ. ಇದು ಪತ್ರಕರ್ತರನ್ನು ಹಾಗೂ ಸಂಪಾದಕರನ್ನು ಸಂಕಷ್ಟಕ್ಕೆ ದೂಡಿದೆ. ಮಾನ್ಯ ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಗಮನಿಸಿ ಕೂಡಲೇ ಸೂಕ್ತ ಜಾಹೀರಾತುಗಳ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯಿಸಿದ್ದಾರೆ.





