ಮೈಸೂರಿನ ಖ್ಯಾತ ಛಾಯಾಗ್ರಾಹಕ ನೇತ್ರರಾಜು ನಿಧನ
ದಸರಾ ಸಂದರ್ಭದಲ್ಲಿ ಭಾರೀ ವೈರಲ್ ಆಗಿದ್ದ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು

ಮೈಸೂರು, ಮೇ 21: ಮೈಸೂರಿನ ಖ್ಯಾತ ಛಾಯಾಗ್ರಾಹಕ ನೇತ್ರರಾಜು(62) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಆಂದೋಲನ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಇವರು ಕೆಲಸ ಮಾಡಿದ್ದರು. ಇವರ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದ್ದವು.
2019ರಲ್ಲಿ ದಸರಾ ಸಂದರ್ಭದಲ್ಲಿ ತಾಯಿ-ಮಗ ಇಬ್ಬರು ಅರಮನೆಯ ದೀಪಾಲಂಕಾರವನ್ನು ಆಶ್ಚರ್ಯದಿಂದ ನೋಡುತ್ತಿರುವ ಅಪರೂಪದ ಚಿತ್ರವನ್ನು ಕ್ಲಿಕ್ಕಿಸಿದ್ದು, ಇದು ಪ್ರಸಿದ್ಧಿ ಪಡೆದಿತ್ತು. ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಕಾಡುಗಳ್ಳ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ಹಲವಾರು ದಿನ ಕಾಡಿನಲ್ಲೇ ಉಳಿದು ಅತ್ಯದ್ಭುತ ಛಾಯಾಚಿತ್ರಗಳನ್ನು ತೆಗೆದು ಜನಮನ್ನಣೆಗೆ ಪಾತ್ರರಾಗಿದ್ದರು.
2014ರಲ್ಲಿ ಇವರು ಕರ್ನಾಟಕದ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ನೇತ್ರರಾಜು ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೃತ ನೇತ್ರರಾಜು ಅವರು ತಾಯಿ, ಪತ್ನಿ ಪುತ್ರಿ ನಿತ್ಯಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರರವನ್ನು ಸಾರ್ವಜನಿಕರ ದರ್ಶನಕ್ಕೆ ವಿದ್ಯಾರಣ್ಯಪುರಂ ನಲ್ಲಿರು ನೇತ್ರ ಸ್ಟುಡಿಯೋ ಬಳಿ ಇಡಲಾಗುವುದು. ಶನಿವಾರ ಬೆಳಗ್ಗೆ 12.30 ಗಂಟೆಗೆ ಮೈಸೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಸೇರಿ ಹಲವರ ಸಂತಾಪ
ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ನೃತ್ರರಾಜು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸಂಗತಿ ತಿಳಿದು ಬಹಳ ಆಘಾತವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಒಳಗಣ್ಣುಗಳನ್ನು ನಿರಂತರವಾಗಿ ಮಾನವೀಯವಾಗಿ, ಸಹೃದಯತೆಯಿಂದ ತೆರೆದಿರುತ್ತಿದ್ದ ನೇತ್ರರಾಜು ಅವರು ಮೈಸೂರು ದಸರಾ ಸಂದರ್ಭದಲ್ಲಿ ತೆಗೆದಿದ್ದ ಒಂದು ಛಾಯಾಚಿತ್ರ ಈಗಲೂ ಮನಕಲಕುತ್ತದೆ. ಇವರ ಅಗಲಿಕೆ ಪತ್ರಿಕಾ ವೃತ್ತಿಗೆ ತುಂಬಲಾರದ ನಷ್ಟ. ದೇವರು ಇವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ್, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.







