ಉಡುಪಿ ಜಿಲ್ಲೆಯಾದ್ಯಂತ ಕಾರ್ಮಿಕರು, ಕೃಷಿಕೂಲಿಕಾರರಿಂದ ಜಂಟಿ ಪ್ರತಿಭಟನೆ

ಉಡುಪಿ, ಮೇ 21: ಕರೋನ ರೋಗವನ್ನು ತಡೆಗಟ್ಟಬೇಕಾದರೆ ಆದಾಯ ಇಲ್ಲದ ದಿನಗೂಲಿ ಕಾರ್ಮಿಕರಿಗೆ ಜೀವನಾಶ್ಯಕ ಅಗತ್ಯ ವಸ್ತುಗಳನ್ನು ಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮುಂದಿನ ಮೂರು ತಿಂಗಳವರೆಗೆ 10 ಸಾವಿರ ರೂ.ವನ್ನು ಖಾತೆಗೆ ಜಮೆ ಮಾಡಬೇಕೆಂದು ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ, ಪ್ರಾಂತ ಕೃಷಿಕೂಲಿಕಾರರ ಸಂಘದ ಸದಸ್ಯರು ಉಡುಪಿ ಜಿಲ್ಲೆಯಾದ್ಯಂತ ತಮ್ಮ ಮನೆ ಮನೆ ಗಳಲ್ಲಿ, ಕಚೇರಿಗಳ ಎದುರು ಶುಕ್ರವಾರ ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆ ನಡೆಸಿದರು.
ಪ್ರತಿಯೊಬ್ಬರಿಗೂ 10 ಕೆಜಿ ಪೌಷ್ಠಿಕಾಂಶ ಆಹಾರಧಾನ್ಯಗಳನ್ನು ವಿತರಿಸಬೇಕು. ಪ್ರತಿಯಬ್ಬರಿಗೂ ಸರಕಾರ ಉಚಿತ ಲಸಿಕೆಗಳನ್ನು ನೀಡಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲರಿಗೂ ವ್ಯಾಕ್ಸಿನ್, ಆಕ್ಸಿಜನ್ ಕೊರತೆಯಾಗದಂತೆ ಸಮರೋ ಪಾದಿಯಲ್ಲಿ ಸರಕಾರ ಕೆಲಸ ಮಾಡಬೇಕು. ಕೋವಿಡ್ನಿಂದ ಮೃತರಾದವರಿಗೆ ಪರಿಹಾರ ಒದಗಿಸಬೇಕು. ಸರಕಾರ ಬೆಲೆ ಏರಿಕೆ ಹೊರೆಯನ್ನು ನಿರುದ್ಯೋಗಿ ಬಡಜನರ ಮೇಲೆ ವಿಧಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಲಾಕ್‌ಡೌನ್ ಅವಧಿಯಲ್ಲಿ ರಜೆಗಳನ್ನು ಸಂಬಳ ಸಮೇತ ರಜೆ ಎಂದು ಘೋಷಿಸಬೇಕು. ಅಗತ್ಯ ಔಷಧಿಗಳ ಕಾಳಸಂತೆಯನ್ನು ಕೂಡಲೇ ನಿಲ್ಲಿಸಬೇಕೆಂದು ಸಿಐಟಿಯು ಕೃಷಿಕೂಲಿಕಾರರ ಸಂಘ_, ಪ್ರಾಂತ ರೈತ ಸಂಘಗಳ ನೇತೃತ್ವದಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ಭಾಗವಾಗಿ ಜಿಲ್ಲೆಯ ಉಡುಪಿ, ಕಾರ್ಕಳ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾಪು ತಾಲೂಕಿನ ವಿವಿಧೆಡೆ ನಡೆದ ಪ್ರತಿಭಟನೆ ಯಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಶಶಿಧರ ಗೊಲ್ಲ, ಕಾರ್ಯದರ್ಶಿಗಳಾದ ಶೇಖರ ಬಂಗೇರ, ಉಮೇಶ್ ಕುಂದರ್, ಭಾರತಿ, ಕುಂದಾಪುರ ತಾಲೂಕು ಸಂಚಾಲಕ ಎಚ್.ನರಸಿಂಹ, ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಕೃಷಿಕೂಲಿಕಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವೆಂಕಟೇಶ್ ಕೋಣಿ ಭಾಗವಹಿಸಿದ್ದರು.







