ಆದಿತ್ಯನಾಥ್ ಸರಕಾರದ ಸಾಮಾಜಿಕ ಮಾಧ್ಯಮವನ್ನು ನಿಭಾಯಿಸುತ್ತಿದ್ದಾತ ಆತ್ಮಹತ್ಯೆ
ಮಾನಸಿಕ ಕಿರುಕುಳ, ಒತ್ತಡ ಆರೋಪ

ಲಕ್ನೋ: ಉತ್ತರಪ್ರದೇಶದ ಮಾಹಿತಿ ಇಲಾಖೆಗೆ ಸೋಷಿಯಲ್ ಮೀಡಿಯಾವನ್ನು ನಿರ್ವಹಿಸುತ್ತಿದ್ದ 27 ವರ್ಷದ ಪಾರ್ತ್ ಶ್ರೀವಾಸ್ತವ ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಮಾನಸಿಕ ಕಿರುಕುಳ ಹಾಗೂ ಒತ್ತಡ ಸಾವಿಗೆ ಕಾರಣವಾಗಿದೆ ಎಂದು ಶ್ರೀವಾಸ್ತವ ಅವರ ಕುಟುಂಬದವರು ಆರೋಪಿಸುತ್ತಿದ್ದಾರೆ.
ಶ್ರೀವಾಸ್ತವ ಬುಧವಾರ ತಮ್ಮ ಲಕ್ನೋ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಇಬ್ಬರು ಹಿರಿಯ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಸಾಯುವ ಮುನ್ನ ಬರೆದಿರುವ ಆತ್ಮಹತ್ಯೆ ಪತ್ರವೊಂದರಲ್ಲಿ ದೂರಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಡೆತ್ ನೋಟನ್ನು ವಶಪಡಿಸಿಕೊಂಡಿಲ್ಲ ಎಂದು ಪೊಲೀಸರು ಹೇಳುತ್ತಿದ್ದು, ಘಟನೆ ನಡೆದು ಎರಡು ದಿನಗಳು ಕಳೆದರೂ ಇನ್ನೂ ಎಫ್‌ಐಆರ್ ದಾಖಲಿಸಲಾಗಿಲ್ಲ.
“ಉತ್ತರಪ್ರದೇಶ ಸರಕಾರದ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ’’ ಎಂದು The Print ಗೆ ಪಾರ್ಥ ಅವರ ತಾಯಿ ರಾಮಾ ಶ್ರೀವಾಸ್ತವ ತಿಳಿಸಿದ್ದಾರೆ.