ಉಡುಪಿ : ಕೋವಿಡ್-19 ಚಿಕಿತ್ಸೆಗೆ ದರ ನಿಗದಿ
ಉಡುಪಿ, ಮೇ 21: ಕೋವಿಡ್-19 ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ.
ಜಿಲ್ಲೆಯ ಜಿಲ್ಲಾಧಿಕಾರಿಗಳ ರೆಫರಲ್ ಮೂಲಕ ಸರಕಾರಿ ಕೋಟಾದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ವೆಚ್ಚ ವನ್ನು ಸರಕಾರವೇ ಭರಿಸಲಿದೆ. ಸರಕಾರಿ ಕೋಟಾದ ರೋಗಿಗಳಿಗೆ ರೆಮ್‌ಡಿಸಿವಿರ್ ಇಂಜೆಕ್ಷನ್‌ಅನ್ನು ಸಹ ಉಚಿತವಾಗಿ ಒದಗಿಸಲಾಗುತ್ತದೆ.
ಕೋವಿಡ್ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಲ್ಲಿ ಸರಕಾರ ನಿಗದಿಪಡಿಸಿರುವ ಜನರಲ್ ವಾರ್ಡ್‌ಗೆ 10,000 ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ 15,000 ರೂ., ಹೆಚ್‌ಡಿಯು 12,000 ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ಸಹಿತ 25,000 ರೂ. ದರಗಳ ಮಿತಿಯಲ್ಲಿ ಚಿಕಿತ್ಸೆಯ ವೆಚ್ಚವನ್ನು ರೋಗಿಗಳೇ ಭರಿಸಬೇಕಾಗುತ್ತದೆ.
ಖಾಸಗಿ ಆಸ್ಪತ್ರೆಗಳು ಕೋವಿಡ್-19 ರೋಗಿಗಳನ್ನು ದಾಖಲು ಮಾಡಿ ಕೊಳ್ಳಲು ನಿರಾಕರಿಸಿದ್ದಲ್ಲಿ, ಚಿಕಿತ್ಸೆ ನೀಡಲು ವಿಳಂಬ ಮಾಡಿದರೆ ಅಥವಾ ಸರಕಾರ ನಿಗದಿ ಮಾಡಿರುವ ದರಗಳಿಗಿಂತ ಹೆಚ್ಚಿನ ದರಗಳನ್ನು ವಿಧಿಸಿದರೆ ಟೋಲ್ ಫ್ರೀ ಸಂಖ್ಯೆ: 1800 425 8330ಗೆ ಹಾಗೂ 1912ಗೆ ಕರೆ ಮಾಡಿ ದೂರುನೀಡಬಹುದು.ಅಥವಾ ಇಮೇಲ್ -sastgrievance@gmail.com- ಗೆ ದೂರು ಸಲ್ಲಿಸಬಹುದು ಹಾಗೂ ದೂರವಾಣಿ ಸಂಖ್ಯೆ: 080-22536200 ಗೆ ಕರೆ ಮಾಡಬಹುದು ಎಂದು ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







