ಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಅಕ್ರಮ ಮಾರಾಟ: 6 ಮಂದಿ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಮೇ 21: ಜಿಲ್ಲೆಯ ಕೊಪ್ಪ ಪಟ್ಟಣದ ಸರಕಾರಿ ಆಸ್ವತ್ರೆಯಲ್ಲಿ ಕೆಲ ತಿಂಗಳುಗಳ ಹಿಂದೆ ಮಕ್ಕಳ ಮಾರಾಟ ಪ್ರಕರಣ ವರದಿಯಾದ ಬೆನ್ನಲ್ಲೇ ಸದ್ಯ ಮತ್ತೆ ಮೂರು ಮಕ್ಕಳ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.
ಅಕ್ರಮವಾಗಿ ಮಗು ಮಾರಾಟ ಮಾಡಿದ ಹಾಗೂ ಮಕ್ಕಳನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಸಂಬಂಧ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮತ್ತೊಂದು ಪ್ರಕರಣದಲ್ಲಿ ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ತಾಲೂಕಿನ ವನಜಾ ಮತ್ತು ಕೀನ್ಯಾ ನಾಯಕ್ ದಂಪತಿ ಬನ್ನೂರಿನ ಯೋಗೇಶ್ ಮತ್ತು ಕವಿತಾ ದಂಪತಿಗೆ ಜನಿಸಿದ್ದ ಹೆಣ್ಣು ಮಗುವನ್ನು ಅಕ್ರಮವಾಗಿ ದತ್ತು ಪಡೆದಿದ್ದಾರೆ, ಭಂಡಿಗಡಿಯ ಜಾಹಿರಾ ಮತ್ತು ಶುಕುರ್ ಅಹಮ್ಮದ್ ದಂಪತಿ ಕೊಪ್ಪ ಸರಕಾರಿ ಆಸ್ವತ್ರೆಗೆ ಭೇಟಿ ನೀಡಿದಾಗ ಅಪರಿಚಿತರು ಗಂಡು ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಅವರಿಂದ ಮಗುವನ್ನು ಅಕ್ರಮವಾಗಿ ದತ್ತು ಪಡೆದುಕೊಂಡು ಸಾಕಿದ್ದಾರೆಂದು ಅನಾಮಧೇಯ ವ್ಯಕ್ತಿಗಳು ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೊಪ್ಪ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿದ ವೇಳೆ ಕಾನೂನು ಮೀರಿ ಮಕ್ಕಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.
ದೂರಿನಲ್ಲಿ ಉಡುಪಿ ಜಿಲ್ಲೆಯ ಶಾಹಿಸ್ತಾ ಮತ್ತು ಫಯಾಜ್ ಹಂಗಾರ ದಂಪತಿ ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆಯಲಾಗಿದೆ ಎಂದು ಉಲ್ಲೇಖ ಮಾಡಲಾಗಿದೆಯಾದರೂ ಈ ದಂಪತಿ ಬಗ್ಗೆ ದೂರಿನಲ್ಲಿ ಯಾವ ಮಾಹಿತಿಯನ್ನೂ ದೂರುದಾರರು ನೀಡದ ಪರಿಣಾಮ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಈ ಮೂರು ಪ್ರಕರಣಗಳಲ್ಲಿ ವನಜಾ, ಶಾಹಿಸ್ತಾ, ಕೆ.ಎಂ.ಜಾಹಿರಾ ಎಂಬವರು ಗರ್ಭಿಣಿಯಾಗಿರದೇ ಆಸ್ವತ್ರೆಯಲ್ಲಿ ಹೊರರೋಗಿ ಹಾಗೂ ಒಳರೋಗಿ ಚೀಟಿಯನ್ನು ಮಾಡಿಸದೇ ನೇರವಾಗಿ ಹೆರಿಗೆ ಮಾಡಿಸಿಕೊಂಡು ಹೋಗಿರುವಂತೆ ಸುಳ್ಳು ದಾಖಲಾತಿಯನ್ನು ಸೃಷ್ಟಿಸಿದ್ದಾರೆ. ಅಲ್ಲದೇ ಜನನ ಪ್ರಮಾಣ ಪತ್ರವನ್ನು ಕಾನೂನು ಬಾಹಿರವಾಗಿ ಪಡೆದಿದ್ದಾರೆಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಆದ್ದರಿಂದ ಮಗು ಕೊಟ್ಟವರು ಹಾಗೂ ಪಡೆದವರ ವಿರುದ್ಧ ಬಾಲನ್ಯಾಯ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ ಕೊಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ವನಜಾ-ಕೀನ್ಯಾ ನಾಯಕ್ ದಂಪತಿ, ಜಾಹಿರಾ-ಶುಕುರ್ ಅಹಮ್ಮದ್ ದಂಪತಿ ಹಾಗೂ ಯೋಗೇಶ್-ಕವಿತಾ ದಂಪತಿ ವಿರುದ್ಧ ದೂರು ದಾಖಲಾಗಿದೆ. ದೂರಿನಲ್ಲಿ ಡಾ.ಬಾಲಕೃಷ್ಣ ಅವರು ಪ್ರಸೂತಿ ತಜ್ಞರಾಗಿದ್ದ ವೇಳೆಯಲ್ಲಿ ಈ ಘಟನೆಗಳು ನಡೆದಿದೆ ಎಂದು ಉಲ್ಲೇಖಿಸಲಾಗಿದ್ದು, ಅವರನ್ನೂ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವನಜಾ ಮತ್ತು ಕೀನ್ಯಾ ನಾಯಕ್ ದಂಪತಿ, ಜಾಹಿರ ಮತ್ತು ಶುಕುರ್ ಅಹಮ್ಮದ್ ದಂಪತಿ ಬಳಿ ಇದ್ದ ಒಂದು ಹೆಣ್ಣು ಹಾಗೂ ಗಂಡು ಮಗುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವಶಕ್ಕೆ ಪಡೆದುಕೊಂಡು ಪಟ್ಟಣದ ಆಸ್ವತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದರು. ನಂತರ ಚಿಕ್ಕಮಗಳೂರಿನ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದಾರೆ. ಮಕ್ಕಳನ್ನು ಸರಕಾರ ದತ್ತು ಸಂಸ್ಥೆಯ ಪಾಲನೆ ಹಾಗೂ ಪೋಷಣಾ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲಾಗಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







