ಆಕ್ಸಿಜನ್ ಬೇಡಿಕೆ, ಕೇಂದ್ರದ ಹಂಚಿಕೆ ಬಗ್ಗೆ ವಿವರ ಸಲ್ಲಿಸಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಮೇ 21: ರಾಜ್ಯದಲ್ಲಿ ಮೇ 17 ರಿಂದ 24ರವರೆಗಿನ ಪ್ರತಿದಿನದ ಆಕ್ಸಿಜನ್ ಬೇಡಿಕೆ, ಕೇಂದ್ರದ ಹಂಚಿಕೆ, ಪಡೆದುಕೊಂಡ ಪ್ರಮಾಣ ಹಾಗೂ ಜಿಲ್ಲಾವಾರು ಬಫರ್ ದಾಸ್ತಾನು ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ರಾಜ್ಯ ಸರಕಾರ ಸಲ್ಲಿಸಿದ ಲಿಖಿತ ಹೇಳಿಕೆ ಪರಿಶೀಲಿಸಿದ ನ್ಯಾಯಪೀಠ, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಹಾಗೆಯೇ ಇದೆ. ಬೇಕಾಗುವಷ್ಟು ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ ಎಂದು ಹೇಳಿತು.
ಮೇ 17 ಮತ್ತು 18ರ ವಿವರ ಗಮನಿಸಿದರೆ ರಾಜ್ಯಕ್ಕೆ ಹಂಚಿಕೆಯಾದ ಪೂರ್ಣ ಪ್ರಮಾಣದ ಕೋಟಾವನ್ನು ಸರಕಾರ ಪಡೆದುಕೊಳ್ಳುತ್ತಿಲ್ಲ ಎಂದು ಹೇಳಿತು. ರಾಜ್ಯದಲ್ಲಿ ಮೇ 17 ರಿಂದ 24ರವರೆಗಿನ ಪ್ರತಿದಿನದ ಆಕ್ಸಿಜನ್ ಬೇಡಿಕೆ, ಕೇಂದ್ರದ ಹಂಚಿಕೆ, ಪಡೆದುಕೊಂಡ ಪ್ರಮಾಣ ಹಾಗೂ ಸುಪ್ರೀಂಕೋರ್ಟ್ ಜಿಲ್ಲಾವಾರು ಬಫರ್ ಆಕ್ಸಿಜನ್ ದಾಸ್ತಾನು ವ್ಯವಸ್ಥೆ ಮಾಡಿರುವ ಬಗ್ಗೆ ವಿವರ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.





