ಶೃಂಗೇರಿ: ತಾಲೂಕು ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿದ ತಹಶೀಲ್ದಾರ್; ವಿಡಿಯೋ ವೈರಲ್
ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಚಿಕ್ಕಮಗಳೂರು, ಮೇ 21: ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದಲ್ಲಿ ಅರಣ್ಯಾಧಿಕಾರಿಗಳ ತಂಡ ಮೋಜು ಮಸ್ತಿಗೆ ಹೊರಟ್ಟಿದ್ದ ಸುದ್ದಿ ಗುರುವಾರ ವರದಿಯಾಗಿದ್ದರೆ, ಶುಕ್ರವಾರ ಶೃಂಗೇರಿ ತಾಲೂಕಿನ ತಹಶೀಲ್ದಾರ್ ತಮ್ಮ ಕಚೇರಿಯಲ್ಲಿ ಸಿಬ್ಬಂದಿಯೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಹಶೀಲ್ದಾರ್ ತಾಲೂಕು ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಹಶೀಲ್ದಾರ್ ವಿರುದ್ಧ ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಅವರೇ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅಧಿಕಾರಿ. ಶುಕ್ರವಾರ ಬೆಳಗ್ಗೆ ಶೃಂಗೇರಿ ತಹಶೀಲ್ದಾರ್ ಅಂಬುಜಾ ಅವರು ತಾಲೂಕು ಕಚೇರಿಗೆ ಬರುತ್ತಿದ್ದಂತೆ ಕಚೇರಿಯ ಸಿಬ್ಬಂದಿ ಕೊಠಡಿಯೊಂದರಲ್ಲಿ ಸೇರಿಕೊಂಡು ತಹಶೀಲ್ದಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತಹಶೀಲ್ದಾರ್ ಅಂಬುಜಾ ಕಚೇರಿಯ ಟೇಬಲ್ ಮೇಲೆಯೇ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸಿಬ್ಬಂದಿಯೊಂದಿಗೆ ಆಚರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಾರ್ವಜನಿಕರಿಗೆ ಮದುವೆ ಮತ್ತಿತರ ಸಭೆ ಸಮಾರಂಭಗಳನ್ನು ಮಾಡಲು ಸರಕಾರವೇ ನಿರ್ಬಂಧ ಹೇರಿದೆ. ಈ ನಿಯಮವನ್ನು ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಾದರಿಯಾಗಬೇಕು. ಆದರೆ ಸರಕಾರದ ಆದೇಶ ಪಾಲನೆ ಮಾಡಬೇಕಾದ ತಹಶೀಲ್ದಾರ್ ಅವರೇ ಸರಕಾರದ ನಿಯಮವನ್ನು ಗಾಳಿಗೆ ತೂರಿ ಸಿಬ್ಬಂದಿಯೊಂದಿಗೆ ಗುಂಪಾಗಿ ಸಂಭ್ರಮಾಚರಣೆ ಮಾಡಿರುವುದು ಅಪರಾಧವಾಗಿದೆ. ತಹಶೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಬಿಜೆಪಿ ಪಕ್ಷದ ಮುಖಂಡರು ಶೃಂಗೇರಿ ತಹಶೀಲ್ದಾರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.







