ಮಧ್ಯಪ್ರದೇಶ: ಚುಚ್ಚುಮದ್ದುಗಳ ಕೊರತೆಯ ನಡುವೆ ಬ್ಲಾಕ್ ಫಂಗಸ್ನಿಂದ ನಾಲ್ವರ ಸಾವು

ಭೋಪಾಲ,ಮೇ 21: ಮ್ಯುಕರ್ಮೈಕೊಸಿಸ್ ಅಥವಾ ಬ್ಲಾಕ್ ಫಂಗಸ್ (ಕಪ್ಪು ಶಿಲೀಂಧ್ರ) ರೋಗದಿಂದ ಮಧ್ಯಪ್ರದೇಶದ ದಾಮೋಹ್ ಮತ್ತು ಬಾಲಾಘಾಟ್ಗಳ ತಲಾ ಇಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಈ ರೋಗಕ್ಕೆ ಚಿಕಿತ್ಸೆಯಲ್ಲಿ ಬಳಕೆಯಾಗುವ ಚುಚ್ಚುಮದ್ದುಗಳ ತೀವ್ರ ಕೊರತೆಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೋವಿಡ್ನಿಂದ ಚೇತರಿಸಿಕೊಂಡಿದ್ದ ದಾಮೋಹ್ ನಿವಾಸಿಗಳಾದ ದೀಪಕ ಸೋನಿ (39) ಮತ್ತು ನಿತಿನ್ ಜೈನ್(30) ಹಾಗೂ ಬಾಲಾಘಾಟ್ ನಿವಾಸಿಗಳಾದ ಚಿನು ಲಾಲ್ವಾನಿ(42) ಮತ್ತು ಶೇಷರಾಮ ಕುಚಲಾಹಿ(38) ಮೃತವ್ಯಕ್ತಿಗಳಾಗಿದ್ದಾರೆ.
ನಾಲ್ವರು ಬ್ಲಾಕ್ ಫಂಗಸ್ ರೋಗಿಗಳನ್ನು ಚಿಕಿತ್ಸೆಗಾಗಿ ಭೋಪಾಲಕ್ಕೆ ರವಾನಿಸಲಾಗಿದೆ ಎಂದು ದಾಮೋಹ್ನ ಇಎನ್ಟಿ ತಜ್ಞ ವಿಶಾಲ ಶುಕ್ಲಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತಮ್ಮ ಜಿಲ್ಲೆಗಳಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಬಳಕೆಯಾಗುವ ಆ್ಯಂಫೊಟೆರ್ಸಿನ್-ಬಿ ಚುಚ್ಚುಮದ್ದುಗಳು ಲಭ್ಯವಿಲ್ಲ ಎಂದು ದಾಮೋಹ್ ಮತ್ತು ಬಾಲಾಘಾಟ್ನ ವೈದ್ಯಾಧಿಕಾರಿಗಳು ಹೇಳಿದ್ದಾರೆ. ಗುರುವಾರ ಇಂದೋರಿನಲ್ಲಿ ಕೋವಿಡ್ ಬಿಕ್ಕಟ್ಟು ನಿರ್ವಹಣೆ ತಂಡಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ ಅವರು,ಬ್ಲಾಕ್ ಫಂಗಸ್ ಚಿಕಿತ್ಸೆ ದುಬಾರಿಯಾಗಿದ್ದು, ದೇಶದಲ್ಲಿ ಶಿಲೀಂಧ್ರ ನಿರೋಧಕ ಚುಚ್ಚುಮದ್ದುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ ಮತ್ತು ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.