ಉಡುಪಿ: ಮುಂಬೈಗೆ ತೆರಳಿರುವ ನಾಲ್ವರು ಕೊರೋನ ಸೋಂಕಿತರ ವಿರುದ್ಧ ಪ್ರಕರಣ ದಾಖಲು

ಉಡುಪಿ, ಮೇ 21: ನಿಯಮ ಉಲ್ಲಂಘಿಸಿ ಮುಂಬೈಗೆ ತೆರಳಿರುವ ಹೋಮ್ ಐಸೋಲೇಶನ್‌ನಲ್ಲಿದ್ದ ನಾಲ್ವರು ಕೊರೋನ ಸೋಂಕಿತರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ಪುರಸಭಾ ವ್ಯಾಪ್ತಿಯ ಲೈಟ್ಹೌಸ್ ವಾರ್ಡ್‌ನ ಕೋಟ್ಯಾನ್ ಮೂಲ ಸ್ಥಾನದ ಬಳಿ ಪಡುವಿನಲ್ಲಿ ವಾಸವಿದ್ದ ಸುಕುಮಾರ ಕೋಟ್ಯಾನ್(47), ಮಮತಾ ಕೋಟ್ಯಾನ್(45), ಮಿತಿ ಕೋಟ್ಯಾನ್(12), ಪ್ರಜ್ವಲ್ ಕೋಟ್ಯಾನ್(14) ಎಂಬವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಮೇ 18ರಿಂದ ಇವರು ಹೋಂ ಐಸೋಲೇಶನ್‌ನಲ್ಲಿದ್ದರು.
ಇವರ ಐಸೋಲೇಷನ್ ಅವಧಿ ಮೇ 27ರಂದು ಮುಕ್ತಾಯಗೊಳ್ಳಲಿದೆ. ಆದರೆ ಇವರು ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಂಬೈಗೆ ಹೋಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಕ್ವಾರೆಂಟೆನ್ ನಿಯಮ ಉಲ್ಲಂಘನೆ: ಕ್ವಾರೆಂಟೆನ್ ನಿಯಮ ಉಲ್ಲಂಘಿಸಿ ಹೊರಗೆ ತಿರುಗಾಡುತ್ತಿದ್ದ ಹೋಮ್ ಐಸೋಲೇಶನ್‌ನಲ್ಲಿದ್ದ ಕೊರೋನ ಸೋಂಕಿತ ಕಾವ್ರಡಿ ಗ್ರಾಮದ ಮುಹಮ್ಮದ್ ಜಾಫರ್ ಎಂಬಾತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ಸಹಾಯಕ ಕಮಿಷನರ್ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದಾಗ ಈ ವಿಚಾರ ಕಂಡುಬಂದಿದೆ. ಕಾವ್ರಾಡಿ ಪಿಡಿಓ ಜಾಫರ್ ವಿರುದ್ಧ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.







