ಉಡುಪಿ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಮನೆ ಸೀಲ್‌ಡೌನ್ : ಜಿಲ್ಲಾಡಳಿತ

ಉಡುಪಿ, ಮೇ 21: ಜಿಲ್ಲೆಯಲ್ಲಿ ಕೊರೋನ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೊರೋನ ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡುವ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾಡಳಿತ ಕಳೆದ ವರ್ಷದಂತೆ ಈ ಬಾರಿಯೂ ಆರಂಭಿಸಿದೆ.
ಹೋಮ್ ಐಸೋಲೇಶನ್‌ನಲ್ಲಿರುವ ಕೊರೋನಾ ಸೋಂಕಿತರ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ವ್ಯಾಪ್ತಿಯ ಎರಡು ಮನೆಗಳಿಗೆ ಹಾಗೂ ಕಾಪು ತಾಲೂಕಿನ ಬೆಳಪು ಗ್ರಾಮದ ಮನೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಸೀಲ್‌ಡೌನ್ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸೋಂಕಿತರ ಮನೆಗಳ ಸುತ್ತ ಕೆಂಪು ಟೇಪ್ ಹಚ್ಚಿ ಸೀಲ್‌ಡೌನ್ ಮಾಡಲಾಯಿತು.
ಹೋಮ್ ಐಸೋಲೇಶನ್‌ನಲ್ಲಿರುವ ಸೋಂಕಿತರನ್ನು ಭೇಟಿ ಮಾಡಿದ ಜಿಲ್ಲಾ ಧಿಕಾರಿ, ಯಾವುದೇ ಸಮಸ್ಯೆಗಳಿದ್ದರೂ ಪೊಲೀಸರಿಗೆ, ಗ್ರಾಪಂ ಅಧಿಕಾರಿಗಳಿಗೆ ತಿಳಿಸಬೇಕೆ ಹೊರತು ಯಾವುದೇ ಕಾರಣಕ್ಕೂ ಹೊರಗಡೆ ಬರಬಾರದು ಎಂದು ತಿಳಿಸಿದರು. ಬಳಿಕ ಸೋಂಕಿತರ ಆರೋಗ್ಯ ವಿಚಾರಿಸಿದ ಧೈರ್ಯ ತುಂಬಿದ ಜಿಲ್ಲಾಧಿಕಾರಿ, ಮನೆಯಿಂದ ಹೊರಗಡೆ ಬಾರದೆ ಮನೆಯಲ್ಲಿಯೇ ಇದ್ದು ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ತಿಳಿಸಿದರು.
ನಂತರ ನೆರೆಮನೆಯವರನ್ನು ಭೇಟಿಯಾದ ಜಿಲ್ಲಾಧಿಕಾರಿ ಅವರ ಆರೋಗ್ಯ ವನ್ನೂ ಕೂಡ ವಿಚಾರಿಸಿದರು. ಕೊರೋನಾ ಸೋಂಕಿತರು ಹೊರಗಡೆ ತಿರು ಗಾಡುತ್ತಿದ್ದಾರೆ ಎಂಬ ದೂರಿನಲ್ಲಿ ಹಿನ್ನೆಲೆಯಲ್ಲಿ ಮತ್ತು ಅವರ ಮೇನೆ ನಿಗಾ ಇಡಲು ಇದೀಗ ಮನೆಗಳನ್ನು ಸೀಲ್‌ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾ ಧಿಕಾರಿ ತಿಳಿಸಿದರು.
ಅದೇ ರೀತಿ ಜಿಲ್ಲೆಯಾದ್ಯಂತ ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಕೋಟ ಗ್ರಾಪಂ ವ್ಯಾಪ್ತಿಯಲ್ಲಿ ಗಿಳಿಯಾರು, ಮಣೂರು ಪಡುಕೆರೆಯಲ್ಲಿ ಮನೆಗಳನ್ನು ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ ಮಾರ್ಗದರ್ಶನದಲ್ಲಿ ಸೀಲ್‌ಡೌನ್ ಮಾಡಲಾಯಿತು.
ಈ ಸಂದರ್ಭದಲ್ಲಿ ಕೋಟ ಹೋಬಳಿ ಕಂದಾಯ ನಿರೀಕ್ಷಕ ರಾಜು, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ ಪಿ, ಸಿಬ್ಬಂದಿಗಳು ರಾಜು, ಮೋಹನ್ ಕೊತ್ವಲ್, ಕೋಟ ಗ್ರಾಮಲೆಕ್ಕಾಧಿಕಾರಿ ಚಲುವರಾಜು, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರು ಸಂತೋಷ್ ಪ್ರಭು, ಪಾಂಡು ಪೂಜಾರಿ, ಶೇಖರ್, ಜಯರಾಮ್ ಶೆಟ್ಟಿ, ಭುಜಂಗ ಗುರುಕಾರ ಹಾಗೂ ಕೋಟ ಗ್ರಾಮ ಸಹಾಯಕ ರಾಜು, ಪಂಚಾಯತ್ ಸಿಬ್ಬಂದಿ ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.
ರೋಗಿ ಆಸ್ಪತ್ರೆಯಲ್ಲಿದ್ದರೂ ಮನೆ ಸೀಲ್‌ಡೌನ್ !
ಕೋವಿಡ್ ಪಾಸಿಟಿವ್ ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ಅಥವಾ ಕೋವಿಡ್ ಸೆಂಟರ್‌ಗೆ ದಾಖಲಾದರೂ ಅವರ ಪ್ರಾಥಮಿಕ ಸಂಪರ್ಕ ಮಾಡಿದವರು ಮನೆ ಯಲ್ಲಿ ಇರುವುದರಿಂದ ಆ ಮನೆಯನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದರು.
ಸೋಂಕಿತರ ಮನೆಯ ಮನೆಯ ಸುತ್ತ ಕೆಂಪು ಟೇಪ್ ಹಾಕಿ, ಒಟ್ಟು 14 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗುವುದು. ಅದನ್ನು ಉಲ್ಲಂಘಿಸಿ ಹೊರಗಡೆ ಬಂದರೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು. ಅಗತ್ಯ ವಸ್ತು ಬೇಕಾದರೆ ಗ್ರಾಪಂ ಟಾಸ್ಕ್ ಪೋರ್ಸ್‌ಗೆ ತಿಳಿಸಬೇಕು. ಈ ಹಿಂದೆ ಪಾಸಿಟಿವ್ ಬಂದ ಮನೆಗಳನ್ನು ಸೀಲ್‌ಡೌನ್ ಮಾಡುವುದಿಲ್ಲ. ಆದರೆ ಈಗ ಈ ಹಿಂದೆ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕ ಮಾಡಿದ ಶೇ.90ರಷ್ಟು ಮಂದಿ ಯನ್ನು ಸೋಂಕು ಕಂಡುಬರುತ್ತಿದೆ ಎಂದರು.







